ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ನೇಮಕ, ಸರ್ಕಾರಕ್ಕೆ ನೋಟಿಸ್
ನವದೆಹಲಿ, ಸೆಪ್ಟೆಂಬರ್ 01: ಸಿಬಿಐ ಮಾಜಿ ಮುಖ್ಯಸ್ಥ ರಾಕೇಶ್ ಆಸ್ಥಾನಾ ಅವರನ್ನು ಇತ್ತೀಚೆಗೆ ದೆಹಲಿ ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿತ್ತು. ಆದರೆ, ದೆಹಲಿ ಪೊಲೀಸ್ ಆಯುಕ್ತರಾಗಿ ರಾಕೇಶ್ ಆಸ್ಥಾನಾ ಅವರ ನೇಮಕಾತಿಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ಕುರಿತಂತೆ ಪ್ರತಿಕ್ರಿಯೆ ಕೇಳಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಅಲ್ಲದೆ ಮಧ್ಯಸ್ಥಿಕೆ ಅರ್ಜಿಗೆ ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ಪೀಠ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿದೆ.
ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಅರ್ಜಿ ಸಲ್ಲಿಸಿತ್ತು. ಅರ್ಜಿದಾರ ಸಂಸ್ಥೆಯ ಪರವಾಗಿ ಇಂದು ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್‌ನಲ್ಲಿ ಸಿಪಿಐಎಲ್ ಸಲ್ಲಿಸಿದ್ದ ಅರ್ಜಿಯನ್ನು ಈ ಪ್ರಕರಣದಲ್ಲಿ ಯಥಾವತ್ತಾಗಿ ನಕಲು ಮಾಡಿದ್ದಾರೆ. ಇದು ದೆಹಲಿ ಹೈಕೋರ್ಟ್ ನಿಯಮಗಳ ಸಂಪೂರ್ಣ ಉಲ್ಲಂಘನೆ ಎಂದು ವಾದಿಸಿದರು.

ಭೂಷಣ್ ಮನವಿಯಿಂದ ನಕಲು ಮಾಡಿದ್ದೀರಾ ಎಂದು ಅರ್ಜಿದಾರರ ಪರ ವಕೀಲರನ್ನು ನ್ಯಾಯಾಲಯ ಕೇಳಿದಾಗ ಅದನ್ನು ಅವರು ನಿರಾಕರಿಸಿದರು. ಇತ್ತ ಕೇಂದ್ರ ಸರ್ಕಾರದ ಪರ ವಾದ ಮಂಡಿಸುತ್ತಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು "ಮುದ್ರಣ ದೋಷಗಳು ಸಹ ಒಂದೇ ಆಗಿರುವುದು ಕಾಕತಾಳೀಯ" ಎಂದರು. ಜೊತೆಗೆ ಅರ್ಜಿದಾರರು ಭೂಷಣ್ ಅವರ ಮಾರ್ಗವನ್ನು ಅನುಸರಿಸುತ್ತಿರುವಂತೆ ತೋರುತ್ತದೆ, ಇದು ಅಪಾಯಕಾರಿ ಮಾರ್ಗವಾಗಿದೆ. ಇಬ್ಬರೂ ಮಧ್ಯಪ್ರವೇಶಕಾರರು ಎಂದರು.
ಅಲ್ಲದೆ ಈ ನೇಮಕಾತಿ ಪ್ರಶ್ನಿಸುವುದು ಅರ್ಜಿದಾರರ ವ್ಯವಹಾರವಲ್ಲ. ಮತ್ತೊಬ್ಬ ವೃತ್ತಿಪರ ಪಿಐಎಲ್ ಅರ್ಜಿದಾರರು ನಾಯಾಲಯದಲ್ಲಿ ಹೀಗೆ ಮಾಡುವುದನ್ನು ತಡೆಯೋಣ ಎಂದ ಅವರು ನೇಮಕಾತಿಗಳಿಗೆ ಸವಾಲೊಡ್ಡುವ ಇಂತಹ ಅರ್ಜಿಗಳ ಸ್ಫೂರ್ತಿಯ ಮೂಲ ಯಾವುದು ಎಂಬುದಾಗಿ ಕೇಳಿದರು. ಜೊತೆಗೆ ಅಗತ್ಯ ಸೇವಾ ವಿಷಯಗಳು ಯಾವುವು ಎಂದು ಪ್ರಶ್ನಿಸಿ ಪಿಐಎಲ್ ಸಲ್ಲಿಸುವ ಔಚಿತ್ಯವನ್ನೂ ಅವರು ಆಕ್ಷೇಪಿಸಿದರು.
"ನನ್ನ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ನಾನು ಇಲ್ಲಿ ವಾದಿಸಲು ಬಯಸುವುದಿಲ್ಲ. ಈ ಅರ್ಜಿಯನ್ನು ಅಪೇಕ್ಷಣೀಯ ದಂಡದೊಂದಿಗೆ ವಜಾಗೊಳಿಸಬೇಕು. ಇದು ನ್ಯಾಯಾಲಯದ ಎಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತದೆ." ಎಂದು ಪ್ರಶಾಂತ್ ಭೂಷಣ್ ಪ್ರತಿಕ್ರಿಯಿಸಿದ್ದಾರೆ.
ವಿವಾದಿತ ಅಧಿಕಾರಿ ರಾಕೇಶ್: ಸಿಬಿಐನಲ್ಲಿ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರೊಂದಿಗೆ ಜಗಳವಾಡುವ ಮೂಲಕ ವಿವಾದಕ್ಕೀಡಾಗಿ ಸುದ್ದಿಯಾಗಿದ್ದ ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಾ ಅವರ ಮೇಲೆ ಎರಡು ಬಾರಿ ಲಂಚ ಪ್ರಕರಣದ ಆರೋಪ ಕೇಳಿ ಬಂದಿತ್ತು. ಆದರೆ, ಸಿಬಿಐನಿಂದ ಕ್ಲೀನ್ ಚಿಟ್ ಪಡೆದರು.
ಬಳಿಕ ನಾಗರಿಕ ವಿಮಾನಯಾನ ಭದ್ರತಾ ಇಲಾಖೆಗೆ ವರ್ಗಾವಣೆಯಾಗಿದ್ದ ರಾಕೇಶ್ ಆಸ್ತಾನಾ ಅವರಿಗೆ ಮಾದಕ ವಸ್ತು ನಿಯಂತ್ರಣ ಬ್ಯೂರೋದ ಹೆಚ್ಚುವರಿ ಅಧಿಕಾರ ನೀಡಲಾಗಿತ್ತು. ನಂತರ ಗಡಿ ಭದ್ರತಾ ಪಡೆ(BSF) ಪ್ರಧಾನ ನಿರ್ದೇಶಕ (DG) ರನ್ನಾಗಿ ನೇಮಿಸಲಾಗಿದೆ. ಆದರೆ, ಅಧಿಕಾರ ಅವಧಿಯನ್ನು ಜುಲೈ 2021ಕ್ಕೆ ಮೊಟಕುಗೊಳಿಸಿ ಪ್ರಧಾನಿ ಮೋದಿ ನೇತೃತ್ವದ ಸಮಿತಿ ಆದೇಶ ನೀಡಿತ್ತು. ಇದಾದ ಬಳಿಕ ಇತ್ತೀಚೆಗೆ ದೆಹಲಿ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದರು. ಆದರೆ, ಮತ್ತೆ ನೇಮಕಾತಿ ವಿವಾದ ಆರಂಭವಾಗಿ ಪ್ರಕರಣ ದೆಹಲಿ ಕೋರ್ಟ್ ಮೆಟ್ಟಿಲೇರಿದೆ.
ವಿಜಯ್ ಮಲ್ಯ ಮನಿಲಾಂಡ್ರಿಂಗ್ ಕೇಸ್, ಅಗಸ್ಟಾ ವೆಸ್ಟ್ ಲ್ಯಾಂಡ್ ಕೇಸ್, ಐಎಎಫ್ ಮುಖ್ಯಸ್ಥರಾಗಿದ್ದ ಎಸ್ ಪಿ ತ್ಯಾಗಿ ಬಂಧನ ಎಲ್ಲವೂ ರಾಕೇಶ್ ಆಸ್ತಾನ ಅವರ ಅವಧಿಯಲ್ಲಿನ ಬೆಳವಣಿಗೆಗಳು, ಗುಜರಾತ್ ಕೇಡರ್ ನ ಐಪಿಎಸ್ ಅಧಿಕಾರಿ ಅವರು ಏಪ್ರಿಲ್ 2016ರಲ್ಲಿ ಸಿಬಿಐ ಸೇರಿದರು, ಡಿಸೆಂಬರ್ 2016ರಿಂದ ಜನವರಿ 2017ರ ತನಕ ಸಿಬಿಐನ ಮಧ್ಯಂತರ ನಿರ್ದೇಶಕರಾಗಿದ್ದರು.












Click it and Unblock the Notifications