ಸರ್ಕಾರದಿಂದ ಈರುಳ್ಳಿ ಮಾರಾಟ; 5 ಕೆಜಿ ಮಾತ್ರ ಖರೀದಿ, ದರ 23 ರೂ.
ನವದೆಹಲಿ, ಸೆಪ್ಟೆಂಬರ್ 27 : ದೇಶದ ಬಹುತೇಕ ನಗರಗಳಲ್ಲಿ ಈರುಳ್ಳಿ ಬೆಲೆ ಅರ್ಧ ಶತಕದ ಗಡಿ ದಾಟಿದೆ. ಬೆಲೆ ಏರಿಕೆಯಿಂದಾಗಿ ಜನರು ಆತಂಕಗೊಂಡಿದ್ದು, ದೆಹಲಿ ಸರ್ಕಾರ ರಿಯಾಯಿತಿ ದರದಲ್ಲಿ ಈರುಳ್ಳಿ ವಿತರಣೆ ಮಾಡಲಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಕುರಿತು ಶುಕ್ರವಾರ ಘೋಷಣೆ ಮಾಡಿದರು. ಶನಿವಾರದಿಂದ ದೆಹಲಿಯಲ್ಲಿ 23.90 ರೂ.ಗಳಿಗೆ ಈರುಳ್ಳಿಯನ್ನು ಜನರಿಗೆ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಒಬ್ಬ ವ್ಯಕ್ತಿ 5 ಕೆಜಿ ಈರುಳ್ಳಿಯನ್ನು ಖರೀದಿ ಮಾಡಬಹುದು ಎಂದು ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ನಿಯಮ ರೂಪಿಸಿದೆ. ದೆಹಲಿಯ ವಿವಿಧ ಪ್ರದೇಶಗಳಲ್ಲಿ ಸರ್ಕಾರದ ವತಿಯಿಂದ 23 ರೂ.ಗೆ ಈರುಳ್ಳಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ.

ದೆಹಲಿ, ಬೆಂಗಳೂರು, ವಿಜಯವಾಡ, ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ ಬಹುತೇಕ ನಗರಗಳಲ್ಲಿ ಈರುಳ್ಳಿ ಬೆಲೆ 50ರ ಗಡಿ ದಾಟಿದೆ. ದೆಹಲಿಯಲ್ಲಿ ಗುರುವಾರದಿಂದ ಬೆಲೆ 80 ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 62 ರೂ. ದರವಿದೆ.
ಮುಂಬೈನಲ್ಲಿ 75 ರೂ., ವಿಜಯವಾಡದಲ್ಲಿ 60, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ 55 ರೂ. ದರವಿದೆ. ಇದರಿಂದಾಗಿ ವ್ಯಾಪಾರಿಗಳು ಮತ್ತು ಜನರು ಕಂಗಾಲಾಗಿದ್ದಾರೆ. ಈ ಬಾರಿ ಸುರಿದ ಮಳೆಯಿಂದಾಗಿ ಬೆಳೆ ನಾಶವಾಗಿದ್ದು, ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ.












Click it and Unblock the Notifications