ಅತೃಪ್ತ ವಿಜಯ್ ಮೇಲ್ಮನೆಗೆ; ಹರ್ಷವರ್ಧನ್ ಸಿಎಂ ಅಭ್ಯರ್ಥಿ
ನವದೆಹಲಿ, ಅ.23: ನರೇಂದ್ರ ಮೋದಿ ದೆಹಲಿ ಗದ್ದುಗೆ ಏರುವ ಮೊದಲು ಅಲ್ಲಿನ ವಿಧಾಸನಭೆಯನ್ನು ತನ್ನ ಕಬ್ಜಾಗೆ ಪಡೆಯಲು ಸರ್ವಪ್ರಯತ್ನ ನಡೆಸಿರುವ ಬಿಜೆಪಿ ನವೆಂಬರಿನಲ್ಲಿ ನಡೆಯುವ ಚುನಾವಣೆಗೆ ಹರ್ಷವರ್ಧನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬುಧವಾರ ಆಯ್ಕೆ ಮಾಡಿದೆ. ಇದೇ ವೇಳೆ, ಅತೃಪ್ತ ವಿಜಯ್ ಗೋಯಲ್ ಅವರನ್ನು ಮೇಲ್ಮನೆಗೆ ಕಳುಹಿಸಲು ಸಹ ತೀರ್ಮಾನಿಸಿದೆ.
ಇದರೊಂದಿಗೆ ತಲೆಬಿಸಿಯಾಗಿ ಪರಿಣಮಿಸಿದ್ದ ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಷಯ ಇತ್ಯರ್ಥವಾದಂತಿದ್ದು, ವೃತ್ತಿಯಿಂದ ENT surgeon ಆಗಿರುವ ಹರ್ಷವರ್ಧನ್ ಸಿಎಂ ಅಭ್ಯರ್ಥಿಯಾಗಿ 'ಸರ್ವಾನುಮತ'ದಿಂದ ಆಯ್ಕೆಯಾದಂತಿದೆ.

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹರ್ಷವರ್ಧನ್ ಹಾಗೂ ವಿವಾದಿತ ವಿಜಯ್ ಗೋಯಲ್ ಮಧ್ಯೆ ಪ್ರಬಲ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ ಹರ್ಷವರ್ಧನ್ ಅವರು ಆಯ್ಕೆಯಾಗಿದ್ದಾರೆ. ಡಿಸೆಂಬರ್ 4ರಂದು ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಡಿ. 8 ಭಾನುವಾರ ಫಲಿತಾಂಶ ಪ್ರಕಟವಾಗಲಿದೆ.
ಕಾಂಗ್ರೆಸ್ ವತಿಯಿಂದ ಶೀಲಾ ದೀಕ್ಷಿತ್, ಆಮ್ ಆದ್ಮಿ ಪಾರ್ಟಿ ವತಿಯಿಂದ ಅರವಿಂದ್ ಕೇಜ್ರಿವಾಲಾ ಮತ್ತು ಇದೀಗ ಬಿಜೆಪಿ ಡಾ. ಹರ್ಷವರ್ಧನ್ ಮಧ್ಯೆ ದೆಹಲಿ ವಿಧಾನಸಭೆ ನಾಯಕತ್ವಕ್ಕಾಗಿ ಜಿದ್ದಾಜಿದ್ದಿ ಹೋರಾಟ ನಡೆಯಲಿದೆ. ವಿಜಯ್ ಗೋಯಲ್ ಪ್ರಸ್ತುತ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದು, ಅದೇ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನೀಡಲು ಬಯಸಿದ್ದು, ಒಂದೇ ವೇಳೆ ಆ ಚುನಾವಣೆಯಲ್ಲಿ ಸೋತರೂ ಮುಂದೆ ರಾಜ್ಯ ಸಭೆಗೆ ಅವರನ್ನು ಆರಿಸಿ ಕಳುಹಿಸಲು ಬಿಜೆಪಿ ವರಿಷ್ಠರು ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ '2013ರ ದೆಹಲಿ ವಿಧಾನಸಭೆ ಚುನಾವಣೆಗೆ ಹರ್ಷವರ್ಧನ್ ಅವರನ್ನು ಪಕ್ಷದ ಸಿಎಂ ಅಭ್ಯರ್ಥಿಯಾಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆ; ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಪ್ರಕಟಿಸಿದ್ದಾರೆ.
ಸಂಸದೀಯ ಮಂಡಳಿ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಹರ್ಷವರ್ಧನ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದ್ದು, ಮತ್ತೊರ್ವ ಆಕಾಂಕ್ಷಿ ದೆಹಲಿ ಬಿಜೆಪಿ ಅಧ್ಯಕ್ಷ ವಿಜಯ್ ಗೋಯಲ್ ಅವರು ಪಕ್ಷದ ತೀರ್ಮಾನಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹರ್ಷವರ್ಧನ್ ಅವರು ಚಿಕ್ಕ ವಯಸ್ಸಿನಿಂದಲೂ ಆರ್‌ಎಸ್‌ಎಸ್ ಸಕ್ರೀಯ ಕಾರ್ಯಕರ್ತರಾಗಿದ್ದರಿಂದ ಆರ್‌ಎಸ್‌ಎಸ್ ಅವರ ಬೆಂಬಲಕ್ಕೆ ನಿಂತಿದೆ ಎನ್ನಲಾಗಿದೆ. ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ, ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಅರುಣ್ ಜೇಟ್ಲಿ ಹಾಗೂ ಅನಂತ್ ಕುಮಾರ್ ಅವರು ಸಂಸದೀಯ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications