ಕಿರುಕುಳ ನೀಡುತ್ತಿದ್ದ ತಂದೆ ಕೊಂದ ಮಗಳ ಸೆರೆ
ನವದೆಹಲಿ,ಮೇ 6: ಕಿರುಕುಳ ನೀಡುತ್ತಿದ್ದ ತಂದೆಯನ್ನು ತನ್ನ ಗೆಳೆಯರ ನೆರವಿನಿಂದ ನಾಜೂಕಾಗಿ ಕೊಂದಿದ್ದ 23 ವರ್ಷದ ಯುವತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕುಲ್ವಿಂದರ್ ಕೌರ್ ಎಂಬ ಯುವತಿ ಗಾಜಿನ ತುಂಡು ಬಳಸಿ ತನ್ನ ತಂದೆಯ ಎದೆಯಲ್ಲಿದ್ದ ಪೇಸ್ ಮೇಕರ್ ಕಿತ್ತು ಹಾಕಿ ಕೊಲೆ ಮಾಡಿದ್ದು ಸಾಬೀತಾಗಿದೆ.
ಆದರೆ, ಆರೋಪಿ ಕುಲ್ವಿಂದರ್ ಕೌರ್ ಅವರು ತನ್ನ ಇಬ್ಬರು ಗೆಳೆಯರ ಜತೆಗೂಡಿ ತನ್ನ 56 ವರ್ಷ ವಯಸ್ಸಿನ ತಂದೆಯನ್ನು ಕೊಂದು ನಂತರ ಆತ ಮೃತಪಟ್ಟಿರುವುದನ್ನು ಖಾತ್ರಿಪಡಿಸಿಕೊಳ್ಳಲು ಗಾಜಿನ ತುಂಡಿನಿಂದ ಪೇಸ್ ಮೇಕರ್ ನ್ನು ಕಿತ್ತು ಹಾಕಿದ್ದರು ಎಂದು ತಿಳಿದು ಬಂದಿದೆ. ಏ.29 ಮತ್ತು 30ರ ಮಧ್ಯರಾತ್ರಿ ಆರೋಪಿ ಕುಲ್ವಿಂದರ್ ಕೌರ್ ಎಂಬಾಕೆ ಪ್ರಿನ್ಸ್ ಸಂಧು(22), ಅಶೋಕ್ ಶರ್ಮ, ಮನೀಷ್ ಅಲಿಯಾಸ್ ಗೋಕು(23) ಎಂಬ ಸ್ನೇಹಿತರ ನೆರವಿನಿಂದ 56 ವರ್ಷದ ತನ್ನ ತಂದೆಯನ್ನೇ ಹತ್ಯೆ ಮಾಡಿದ್ದಾಳೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ ಮೂವರನ್ನು ಖಯಾಲಾ ಪೊಲೀಸರು ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ(ಪಶ್ಚಿಮ) ರಣವೀರ್ ಸಿಂಗ್ ತಿಳಿಸಿದ್ದಾರೆ.

ಕೊಲೆ ನಡೆದ ರಾತ್ರಿ ಕುಲ್ವಿಂದರ್ ಕೌರ್ ಬಾಗಿಲು ತೆಗೆದು ಸಂಧು ಮತ್ತು ಶರ್ಮಾರನ್ನು ಒಳಗೆ ಮಾಡಿಕೊಂಡು, ಅನಂತರ ಮೂವರೂ ಸೇರಿ ನಿದ್ರೆಯಲ್ಲಿದ್ದ ದಲ್ಜೀತ್ ಸಿಂಗ್ ಮೇಲೆ ಕ್ರಿಕೆಟ್ ವಿಕೆಟ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಬಳಿಕ ಆತನಿಗೆ ಅಳವಡಿಸಿದ್ದ ಪೇಸ್ ಮೇಕರ್ ನ್ನು ಗಾಜಿನ ತುಂಡಿನಿಂದ ಸೀಳಿ ತೆಗೆದು ಆತ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡು ಆತನ ಕುತ್ತಿಗೆ ಮತ್ತು ಕಾಲುಗಳನ್ನು ಹಗ್ಗದಿಂದ ಬಿಗಿದು ಪಶ್ಚಿಮ ದೆಹಲಿಯ ಖಯಾಲ ಪ್ರದೇಶದ ಸಮೀಪ ಕಾಲುವೆಯೊಂದರಲ್ಲಿ ಶವ ಎಸೆದಿದ್ದರು ಎಂದು ಸಿಂಗ್ ಹೇಳಿದ್ದಾರೆ.
ಹಲ್ಲೆ ನಡೆಸಿದ ಕ್ರಿಕೆಟ್ ವಿಕೆಟ್, ರಕ್ತಸಿಕ್ತ ಬಟ್ಟೆಗಳು, ಕೇಬಲ್ ವೈರ್ ಮತ್ತು ಮೃತನ ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶವವನ್ನು ಗುರುತಿಸಲು ಪೊಲೀಸರಿಗೆ ಎರಡು ದಿನಗಳು ಬೇಕಾಯಿತು. ಶವ ಗುರುತು ಪತ್ತೆ ಹಚ್ಚಿದ ಸುದ್ದಿ ತಿಳಿಯುತ್ತಿದ್ದಂತೆ ಇನ್ನೋವಾ ವಾಹನವನ್ನು ಉತ್ತಮ ನಗರದ ಮೋಹನ್ ಗಾರ್ಡನ್ ನಲ್ಲಿ ಆರೋಪಿಗಳು ನಿಲ್ಲಿಸಿ ಪರಾರಿಯಾಗಿದ್ದರು ಎಂದು ಸಿಂಗ್ ವಿವರಿಸಿದ್ದಾರೆ. (ಪಿಟಿಐ)












Click it and Unblock the Notifications