ಕ್ರಿಕೆಟ್ಟಿಗ ಯುವರಾಜ್ ಸಿಂಗ್ ತಂದೆಗೂ ಕ್ಯಾನ್ಸರ್
ನವದೆಹಲಿ, ಜೂನ್ 5: ಮೊದಲು ಮಗನಿಗೆ ಈಗ ಅಪ್ಪನಿಗೂ ಕ್ಯಾನ್ಸರ್ ಕಾಣಿಸಿಕೊಂಡಿದೆ. ಯುವರಾಜ್ ಸಿಂಗ್ ಅವರು ಕ್ಯಾನ್ಸರ್ ಪೀಡಿತರಾಗಿ ತದನಂತರ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಈಗ ಆವರ ತಂದೆ ಯೋಗರಾಜ್ ಸಿಂಗ್ ಅವರಿಗೂ ಕ್ಯಾನ್ಸರ್ ಕಾಣಿಸಿಕೊಂಡಿದೆ.
ಗಂಟಲು ಕ್ಯಾನ್ಸರ್ (vocal chords cancer) ನಿಂದ ಬಳಲುತ್ತಿರುವ ಯೋಗರಾಜ್ ಸಿಂಗ್ ಅವರು ಅಮೆರಿಕದಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ 56 ವರ್ಷದ ಯೋಗರಾಜ್ ಸಿಂಗ್ ಅವರು ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗಂಟಲಿನಲ್ಲಿ ಕಾಣಿಸಿಡೊಂಡಿದ್ದ ಗಡ್ಡೆಯನ್ನು ತೆಗೆಸಿ ಹಾಕಿಕೊಂಡಿದ್ದಾರೆ. ಕೆಲ ತಿಂಗಳುಗಳ ಹಿಂದೆಯೇ ಯೋಗರಾಜ್ ಸಿಂಗ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಸ್ವತಃ ಯುವರಾಜ್ ಸಿಂಗ್ ಅವರೇ ಬಲವಂತಪಡಿಸಿ ಅಮೆರಿಕದಲ್ಲಿ (ನ್ಯೂಯಾರ್ಕ್) ಟ್ರೀಟ್ಮೆಂಟ್ ತೆಗೆದುಕೊಳ್ಳುವಂತೆ ಅಪ್ಪನಿಗೆ ಸಲಹೆ ನೀಡಿದ್ದರು ಎನ್ನಲಾಗಿದೆ. (ಪುಸ್ತಕ ರೂಪದಲ್ಲಿ ಯುವರಾಜ್ ಕ್ಯಾನ್ಸರ್ ಗೆದ್ದ ಕತೆ)
'ಅವರು (ಯೋಗರಾಜ್) ಆಗಾಗ ಗಂಟಲು ಬೇನೆ, ಕೆಮ್ಮು ಎಂದು ಹೇಳುತ್ತಿದ್ದರು. ಆದರೆ ಅವರಿಗೆ ನಿಜವಾಗಿಯೂ ಏನಾಗುತ್ತಿದೆ ಎಂಬುದು ಗೊತ್ತಾಗಲಿಲ್ಲ. ಒಂದಷ್ಟು ಔಷಧ ತೆಗೆದುಕೊಂಡು ವಾಸಿಯಾದ ನಂತರ ನಾನೀಗ ಆರಾಮವಾಗಿದ್ದೇನೆ ಅನ್ನುತ್ತಿದ್ದರು. ಆದರೆ ಸಮಸ್ಯೆ ಉಲ್ಬಣಿಸಿದಾಗ ವಿಷಯ ಬಹಿರಂಗವಾಯಿತು' ಎಂದು ಯುವರಾಜ್ ಸಿಂಗ್ ಅವರ ತಾಯಿ ಸತ್ವೀರ್ ಅವರು ತಮ್ಮ ಪತಿಯ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. (ದಿಲ್ಲಿ ಗ್ಯಾಂಗ್ ರೇಪ್: ಮಾನವೀಯತೆ ಮೆರೆದ ಯುವರಾಜ)












Click it and Unblock the Notifications