ಕಾಂಗ್ರೆಸ್ ನ ಭವಿಷ್ಯದ ವಿತ್ತ ಸಚಿವರ ಬಜೆಟ್ ಕಾಪಿ ಐಪ್ಯಾಡ್ ನಲ್ಲಿ: ಚಿದಂಬರಂ
ನವದೆಹಲಿ, ಜುಲೈ 05: "ಕಾಂಗ್ರೆಸ್ ನ ಭವಿಷ್ಯದ ವಿತ್ತ ಸಚಿವರು ಐಪ್ಯಾಡ್ ನಲ್ಲಿ ಬಜೆಟ್ ಕಾಪಿ ತರುತ್ತಾರೆ, ನೋಡುತ್ತಿರಿ" ಎಂದು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರು ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್ ಡಿಎ ಸರ್ಕಾರದ ಮೊದಲ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ(ಜುಲೈ 5)ಮಂಡಿಸಿದರು.
ಈ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಅವರು ಎಂದಿನಂತೆ ಚರ್ಮದ ಬ್ರೀಪ್ ಕೇಸ್ ತರುವ ಬದಲು ಕೆಂಪು ಬಣ್ಣದ ಚೀಲವನ್ನು ತಂದಿದ್ದು ಗಮನ ಸೆಳೆದಿತ್ತು. ವಸಾಹತುಶಾಹಿ ಸಂಸ್ಕೃತಿಗೆ ವಿದಾಯ ಹಾಡಿ, ಭಾರತೀಯ ಅಸ್ಮಿತೆಯನ್ನು ಅಭಿವ್ಯಕ್ತಿಸುವ ಸಂಕೇತವಾಗಿ ನಿರ್ಮಲಾ ಸೀತಾರಾಮನ್ ಅವರು ಈ ರೀತಿ ಚೀಲವನ್ನು ಹೊತ್ತು ತಂದಿದ್ದಾಗಿ ಬಿಜೆಪಿ ಸಮರ್ಥಿಸಿಕೊಂಡಿತ್ತು.

ಬ್ರಿಟಿಶ್ ಸಂಸ್ಕೃತಿಯನ್ನೇ ಇದುವರೆಗೆ ಅನುಸರಿಸಲಾಗುತ್ತಿದ್ದರಿಂದ ಬಜೆಟ್ ಪ್ರತಿಯನ್ನು ಬ್ರೀಫ್ ಕೇಸಿನಲ್ಲಿಯೇ ತರಲಾಗುತ್ತಿತ್ತು. ಆದರೆ ಇದೀಗ ನಿರ್ಮಲಾ ಸೀತಾರಾಮನ್ ಅವರು ಮಡಿಚಿತ ಕೆಂಪು ಬಟ್ಟೆಯಂತೆ ಕಾಣುವ ಚೀಲದಲ್ಲಿ ಬಜೆಟ್ ತಂದಿರುವುದನ್ನು ಪಿ ಚಿದಂಬರಂ ಟೀಕಿಸುವ ಧಾಟಿಯಲ್ಲಿ ಮಾತನಾಡಿದರು.
"ಅವರು(ನಿರ್ಮಲಾ ಸೀತಾರಾಮನ್) ಕೆಂಪು ಬಟ್ಟೆಯಲ್ಲಿ ಬಜೆಟ್ ಪ್ರತಿಯನ್ನು ತರಬಹುದು. ಆದರೆ ನೆನಪಿಡಿ, ಮುಂದೊಮ್ಮೆ ಕಾಂಗ್ರೆಸ್ ನ ಭವಿಷ್ಯದ ವಿತ್ತ ಸಚಿವರು ಐಪ್ಯಾಡ್ ನಲ್ಲಿ ಬಜೆಟ್ ಪ್ರತಿಯನ್ನು ಹೊತ್ತು ತರುತ್ತಾರೆ" ಎಂದು ಅವರು ಹೇಳಿದರು.












Click it and Unblock the Notifications