ಬೆಳಗಾವಿ ಅಧಿವೇಶನ ಮುಗಿಯುವ ಮುನ್ನವೇ ಸರ್ಕಾರ ಪತನ: ಡಿವಿಎಸ್
ನವದೆಹಲಿ, ಡಿಸೆಂಬರ್ 5: ಬೆಳಗಾವಿ ಅಧಿವೇಶನದ ವೇಳೆಗೆ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇರುವುದು ಬೆಳಗಾವಿ ಅಧಿವೇಶನದವರೆಗೆ ಮಾತ್ರ. ಅಧಿವೇಶನ ಪೂರ್ಣಗೊಳ್ಳುವುದೂ ಇಲ್ಲ. ಅದರೊಳಗೇ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಸರ್ಕಾರ ಅಲುಗಾಡುತ್ತಿರುವುದು ನಿಜ. ಶಾಸಕರ ಒಂದು ತಂಡ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ. ಮುಂದೆ ಆಗುವುದನ್ನು ಅಧಿವೇಶನದವರೆಗೂ ಕಾದು ನೋಡಿ ಎಂದಿದ್ದಾರೆ.

ಸರ್ಕಾರದಲ್ಲಿನ ಅತೃಪ್ತ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿ ತನ್ನೆಡೆಗೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಆರೋಪವನ್ನು ಅವರು 'ತೋಳ ಬಂತು ತೋಳ'ದ ಕಥೆಗೆ ಹೋಲಿಸಿದ್ದಾರೆ.
ತೋಳ ಬಂತು ಎಂದು ಕಥೆ ಹೇಳುವುದಕ್ಕೂ, ನಿಜವಾದ ತೋಳ ಬರುವುದಕ್ಕೂ ವ್ಯತ್ಯಾಸವಿದೆ. ಈಗಾಗಲೇ ಚಿಕ್ಕಬಳ್ಳಾಪುರ ಮತ್ತು ಬೆಳಗಾವಿಯ ತೋಳಗಳು ಬಂದಿವೆ. ಇನ್ನು ಗುಹೆಯಲ್ಲಿ ಇರುವ ತೋಳಗಳು ಹೊರಬರುವುದು ಬಾಕಿ ಇದೆ. ಅದಕ್ಕೆ ಸ್ವಲ್ಪ ದಿನ ಕಾಯಬೇಕಿದೆ ಎಂದಿದ್ದಾರೆ.
25 ಕೋಟಿ ರೂ ಕೊಟ್ಟು ಆಪರೇಷನ್ ಕಮಲ ಮಾಡುವಷ್ಟು ಶಕ್ತಿ ಬಿಜೆಪಿಗೆ ಇಲ್ಲ. ತಾನಾಗಿಯೇ ತೋಳಗಳು ಬರುತ್ತಿವೆ. ಎಲ್ಲದಕ್ಕೂ ಕಾಲ ಕೂಡಿಬರಬೇಕು ಎಂಬ ಮಾತಿನಂತೆ ಈಗ ಕಾಲ ಕೂಡಿಬಂದಿದೆ. ಶೀಘ್ರದಲ್ಲಿಯೇ ಸರ್ಕಾರ ತಾನಾಗಿಯೇ ಉರುಳಲಿದೆ ಎಂದು ಹೇಳಿದ್ದಾರೆ.












Click it and Unblock the Notifications