ದೆಹಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು
ನವದೆಹಲಿ, ಫೆ.6 : ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಸರತ್ತು ಗುರುವಾರ ದೆಹಲಿಯಲ್ಲಿ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ದೆಹಲಿಗೆ ಆಗಮಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಪಕ್ಷದ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ವಿವಿರವಾದ ಚರ್ಚೆ ನಡೆಯಲಿದೆ.
ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕೆಪಿಸಿಸಿ ಸಲ್ಲಿಸಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಚರ್ಚೆ ನಡೆಯಲಿದೆ. ಕೇಂದ್ರ ಸಚಿವ ವಯಲಾರ್ ರವಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ ಸಿಂಗ್ ಹಾಗೂ ಆಸ್ಕರ್ ಫರ್ನಾಂಡಿಸ್ ಪಾಲ್ಗೊಳ್ಳಲಿದ್ದಾರೆ. 16 ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. [ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ]

ಅಮೆರಿಕಾ ಅಧ್ಯಕ್ಷ ಮಾದರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯುವ ಮಂಗಳೂರು ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಮೊದಲ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿರುವ ಕಾಂಗ್ರೆಸ್ 16 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಿದೆ. [ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿರುವ ಕ್ಷೇತ್ರ]
ಕೆಪಿಸಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಯಲ್ಲಿ ಒಂದು ಕ್ಷೇತ್ರಕ್ಕೆ ಎರಡು, ಮೂರು ಅಭ್ಯರ್ಥಿಗಳನ್ನು ಶಿಫಾರಸು ಮಾಡಿದೆ. ಸಭೆಯಲ್ಲಿ ಇದನ್ನು ಪರಿಷ್ಕರಿಸಲಾಗತ್ತದೆ. ಅಭ್ಯರ್ಥಿಗಳ ಪಟ್ಟಿಯ ಜೊತೆಗೆ ಚುನಾವಣೆಗೆ ಕೆಪಿಸಿಸಿಯು ಮಾಡಿಕೊಂಡಿರುವ ಸಿದ್ಧತೆ, ಪ್ರಚಾರ ಕಾರ್ಯ ಮುಂತಾದವುಗಳ ಕುರಿತು ಚರ್ಚೆ ನಡೆಯಲಿದೆ.
ಇದಾದ ನಂತರ ಸ್ಕ್ರೀನಿಂಗ್ ಕಮಿಟಿಯು ಪ್ರತಿ ಕ್ಷೇತ್ರಕ್ಕೂ ಸಂಬಂಧಪಟ್ಟಂತೆ ಎರಡರಿಂದ ಮೂರು ಹೆಸರಿರುವ ಸಂಭವನೀಯರ ಅಂತಿಮ ಪಟ್ಟಿ ಹಾಗೂ ಕ್ಷೇತ್ರದ ಹಾಲಿ ಪರಿಸ್ಥಿತಿ ಬಗ್ಗೆ ವರದಿಯನ್ನು ಸಿದ್ಧಪಡಿಸಲಿದೆ. ಈ ವರದಿಯನ್ನು ಸೋನಿಯಾ ಗಾಂಧಿ ಅವರು ಅಧ್ಯಕ್ಷರಾಗಿರುವ ಕೇಂದ್ರ ಚುನಾವಣಾ ಸಮಿತಿಗೆ ಸಲ್ಲಿಸಲಿದೆ. ಅಂತಿಮವಾಗಿ ಈ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.












Click it and Unblock the Notifications