ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ ಮೇಲೆ ಸಿಬಿಐ ಚಾರ್ಜ್ ಶೀಟ್
ನವದೆಹಲಿ, ಜುಲೈ 19: ಏರ್ ಸೆಲ್ ಮ್ಯಾಕ್ಸಿಸ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹಾಗೂ ಅವರ ಮಗ ಕಾರ್ತಿಯನ್ನು ಸಿಬಿಐ ಆರೋಪಿಗಳನ್ನಾಗಿ ಮಾಡಿದೆ. ಜಾರಿ ನಿರ್ದೇಶನಾಲಯವು ಚಾರ್ಜ್ ಶೀಟ್ ಸಲ್ಲಿಸಿದ ತಿಂಗಳ ನಂತರ ಪಟಿಯಾಲ ಕೋರ್ಟ್ ನಲ್ಲಿ ಗುರುವಾರ ಸಿಬಿಐ ಪೂರಕ ಚಾರ್ಜ್ ಶೀಟ್ ದಾಖಲಿಸಿದೆ.
ಏಲ್ ಸೆಲ್ ನಲ್ಲಿ ಗ್ಲೋಬಲ್ ಕಮ್ಯೂನಿಕೇಷನ್ ನಿಂದ ಹೂಡಿಕೆಗೆ ಅನುಕೂಲ ಆಗುವಂತೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅಧಿಕಾರ ದುರುಪಯೋಗ ಮಾಡಿಕೊಂಡು, ಎಫ್ ಐಪಿಬಿ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಇದೇ ಮೊದಲ ಬಾರಿಗೆ ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರ ಹೆಸರು ನೇರವಾಗಿ ಈ ಪ್ರಕರಣದಲ್ಲಿ ಕೇಳಿಬಂದಿದೆ. ಚಿದಂಬರಂ ಹೆಸರನ್ನು ಹಲವು ಕಡೆಗಳಲ್ಲಿ ಜಾರಿ ನಿರ್ದೇಶನಾಲಯವೂ ಪ್ರಸ್ತಾವ ಮಾಡಿದೆ. ಆದರೆ ಆರೋಪಿ ಎಂದು ಎಲ್ಲೂ ಹೇಳಿರಲಿಲ್ಲ.

ಚಿದಂಬರಂ ಹೊರತುಪಡಿಸಿ, ಅವರ ಮಗ ಕಾರ್ತಿ, ಒಂಬತ್ತು ಮಂದಿ ಸರಕಾರಿ ಉದ್ಯೋಗಿಗಳು, ಏರ್ ಸೆಲ್ ಮ್ಯಾಕ್ಸಿಸ್ ಅಧಿಕಾರಿಗಳ ಹೆಸರು ಕೂಡ ಚಾರ್ಜ್ ಶೀಟ್ ನಲ್ಲಿದೆ. ಜುಲೈ 31ರಂದು ಚಾರ್ಜ್ ಶೀಟ್ ಅನ್ನು ಕೋರ್ಟ್ ಗಮನಕ್ಕೆ ತರಲಾಗುವುದು.
ಸಿಬಿಐ ಪ್ರಕಾರ, ಮಾರಿಷಿಯಸ್ ಮೂಲದ- ಮ್ಯಾಕ್ಸಿಸ್ ನ ಸಹವರ್ತಿ ಗ್ಲೋಬಲ್ ಕಮ್ಯೂನಿಕೇಷನ್ ಸರ್ವೀಸಸ್ ಹೋಲ್ಡಿಂಗ್ಸ್ ನಿಂದ ಏರ್ ಸೆಲ್ ಟೆಲಿಕಾಂನಲ್ಲಿ ಎಂಟುನೂರು ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹೂಡಿಕೆ ಮಾಡಲು ಅನುಮತಿ ಕೇಳಲಾಗಿತ್ತು.
ಅದಕ್ಕೆ ಅನುಮತಿ ಪ್ರಧಾನಿ ಅಧ್ಯಕ್ಷರಾಗಿರುವ ಆರ್ಥಿಕ ವ್ಯವಹಾರಗಳ ಸದನ ಸಮಿತಿಯಿಂದ ಬರಬೇಕಿತ್ತು. ಆದರೆ ಹಣಕಾಸು ಸಚಿವಾಲಯವು ಅನುಮತಿ ಕೊಟ್ಟಿತ್ತು. ಆಗ ಅದರ ನೇತೃತ್ವ ವಹಿಸಿದ್ದವರು ಚಿದಂಬರಂ. ಹಣಕಾಸು ಸಚಿವಾಲಯಕ್ಕೆ ಆರು ನೂರು ಕೋಟಿವರೆಗಿನ ಹೂಡಿಕೆಗೆ ಅನುಮತಿ ನೀಡುವ ಅಧಿಕಾರ ಮಾತ್ರ ಇರುತ್ತದೆ.
ಸಿಬಿಐ ಆರೋಪಿಸುವಂತೆ, ಅನುಮತಿ ಸಿಕ್ಕ ನಂತರ ಏರ್ ಸೆಲ್ ಟೆಲಿವೆಂಚರ್ಸ್ ನಿಂದ ಕಾರ್ತಿ ಚಿದಂಬರಂಗೆ ನಂಟಿರುವ ಕಂಪೆನಿಗೆ ಇಪ್ಪತ್ತಾರು ಲಕ್ಷ ಪಾವತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಧಿಸಿದಂತೆ ಕಾರ್ತಿ ಹಾಗೂ ಅವರ ಸಂಸ್ಥೆಗೆ ಸಂಬಂಧಿಸಿದ 1.16 ಕೋಟಿ ರುಪಾಯಿಯನ್ನು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿತ್ತು.
ಆಗಸ್ಟ್ ಏಳರ ತನಕ ಚಿದಂಬರಂರನ್ನು ಬಂಧಿಸಲು ಸಾಧ್ಯವಾಗದಂತೆ ಕೋರ್ಟ್ ಆದೇಶ ಪಡೆದಿದ್ದಾರೆ. ಮೂರನೇ ಬಾರಿಗೆ ಚಿದಂಬರಂ ಅವರ ನಿರೀಕ್ಷಣಾ ಜಾಮೀನನ್ನು ಕೆಲ ದಿನಗಳ ಹಿಂದೆ ಕೋರ್ಟ್ ವಿಸ್ತರಣೆ ಮಾಡಿತ್ತು. ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದ ಚಿದಂಬರಂ, ಈ ಪ್ರಕರಣವನ್ನು ಸುಳ್ಳು, ಪಿತೂರಿ ಎಂದು ಕರೆದಿದ್ದರು.












Click it and Unblock the Notifications