ಏರ್ ಸೆಲ್-ಮ್ಯಾಕ್ಸಿಸ್ ಹಗರಣ: ಚಿದಂಬರಂ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ
ನವದೆಹಲಿ, ನವೆಂಬರ್ 26: ಏರ್‌ಸೆಲ್ -ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಗೆ ಅನುಮತಿ ದೊರೆತಿದೆ ಎಂದು ಸಿಬಿಐ ಪಟಿಯಾಲ ಹೌಸ್ ಕೋರ್ಟ್‌ಗೆ ಸೋಮವಾರ ತಿಳಿಸಿದೆ.
ಪಟಿಯಾಲ ಹೌಸ್ ಕೋರ್ಟ್‌ನ ವಿಶೇಷ ನ್ಯಾಯಾಧೀಶ ಒ ಪಿ ಸೈನಿ 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ ಏರ್ ಸೆಲ್-ಮ್ಯಾಕ್ಸಿಸ್ ಪ್ರಕರಣವನ್ನು ಕೈಗೆತ್ತಿಕೊಂಡರು.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಪ್ರಕರಣದಲ್ಲಿ ಚಿದಂಬರಂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಬಂಧಿಸಿದ ಅಧಿಕಾರಿಗಳಿಂದ ದೊರೆತ ಅನುಮತಿಯನ್ನು ಕೋರ್ಟ್‌ಗೆ ಸಲ್ಲಿಸಿದರು.

ಈ ಪ್ರಕರಣದಲ್ಲಿ ಒಟ್ಟು 18 ಆರೋಪಿಗಳಿದ್ದು, ಅವರಲ್ಲಿ ಆರು ಮಂದಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಉಳಿದ ಐದು ಮಂದಿ ವಿರುದ್ಧವೂ ವಿಚಾರಣೆಗೆ ಈ ಸಂಬಂಧ ಅನುಮತಿ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ವಿವರಿಸಿದರು.
ಈ ನಡುವೆ ಕೋರ್ಟ್, ಚಿದಂಬರಂ ಮತ್ತು ಅವರ ಮಗ ಕಾರ್ತಿ ಚಿದಂಬರಂ ಅವರಿಗೆ ನೀಡಿರುವ ಮಧ್ಯಂತರ ರಕ್ಷಣೆ ಅವಧಿಯನ್ನು ಡಿಸೆಂಬರ್ 18ರವರೆಗೆ ವಿಸ್ತರಿಸಿತು.
ಶನಿವಾರ ನಡೆದ ವಿಚಾರಣೆ ಸಂದರ್ಭದಲ್ಲಿ ತಮ್ಮ ಮೇಲಿನ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದ ಪಿ. ಚಿದಂಬರಂ, ತಮ್ಮ ಬಂಧನದ ನಿರ್ಧಾರವು ದುರುದ್ದೇಶಪೂರಿತ ಎಂದು ಆರೋಪಿಸಿದ್ದರು.












Click it and Unblock the Notifications