ಗಾಜಿಪುರದಲ್ಲಿ ಬಿಜೆಪಿ ಸದಸ್ಯನ ಹತ್ಯೆ, ಸಿಸಿಟಿವಿಯಲ್ಲಿ ಸುಳಿವಿಗಾಗಿ ಹುಡುಕಾಟ
ನವದೆಹಲಿ, ಏಪ್ರಿಲ್ 21: ಪೂರ್ವ ದೆಹಲಿಯ ಗಾಜಿಪುರ ಪ್ರದೇಶದಲ್ಲಿ ಬಿಜೆಪಿ ಸದಸ್ಯ ಹತ್ಯೆಗೀಡಾಗಿದ್ದಾರೆ. ಹತ್ಯೆಯ ಸುಳಿವು ಸಿಗದಿರುವುದರಿಂದ ಪ್ರತ್ಯಕ್ಷದರ್ಶಿಗಳು ಮುಂದೆ ಬಂದು ಸಾಕ್ಷಿ ಹೇಳುವಂತೆ ಪೊಲೀಸರು ಕೋರಿದ್ದಾರೆ. ಈ ನಡುವೆ ಸಿಸಿಟಿವಿಯಲ್ಲಿ ಸುಳಿವಿಗಾಗಿ ಹುಡುಕಾಟ ಜಾರಿಯಲ್ಲಿದೆ. ಬುಧವಾರದಂದು 42 ವರ್ಷದ ಬಿಜೆಪಿ ಸದಸ್ಯನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಜೀತು ಚೌಧರಿ ಎಂದು ಗುರುತಿಸಲಾಗಿದ್ದು, ಬಿಜೆಪಿಯ ಮಯೂರ್ ವಿಹಾರ್ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತೆ (ಪೂರ್ವ) ಪ್ರಿಯಾಂಕಾ ಕಶ್ಯಪ್ ಹೇಳದ್ದಾರೆ. ಪೊಲೀಸರ ಪ್ರಕಾರ, ಘಟನೆ ರಾತ್ರಿ 8.15 ರ ಸುಮಾರಿಗೆ ನಡೆದಿದೆ. ಗಾಜಿಪುರ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಮಯೂರ್ ವಿಹಾರ್ ಪ್ರದೇಶದ ಬಳಿ ಜನರ ಗುಂಪು ನೋಡಿ, ಚದುರಿಸಲು ತೆರಳಿದಾಗ, ಹತ್ಯೆಯ ಬಗ್ಗೆ ತಿಳಿದು ಬಂದಿದೆ. ಒಬ್ಬ ವ್ಯಕ್ತಿ ತನ್ನ ಮನೆಯ ಮುಂಭಾಗದ ರಸ್ತೆಯಲ್ಲಿ ಗುಂಡೇಟಿನಿಂದ ಬಿದ್ದಿರುವುದು ಕಂಡುಬಂದಿದೆ. ರಕ್ತಸ್ರಾವದಿಂದ ಬಿದ್ದಿದ್ದ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ತಿಳಿದು ಬಂದಿದೆ.
''ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹಂತಕರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ,'' ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ) ಪ್ರಿಯಾಂಕಾ ಕಶ್ಯಪ್ ತಿಳಿಸಿದ್ದಾರೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ ಮತ್ತು ಘಟನೆಗಳ ಅನುಕ್ರಮವನ್ನು ಕಂಡುಹಿಡಿಯಲು ಸಹಾಯ ಮಾಡಲು ಮುಂದೆ ಬರಲು ಪ್ರತ್ಯಕ್ಷದರ್ಶಿಗಳನ್ನು ಕೇಳಲಾಗಿದೆ ಎಂದರು.

ಹತ್ಯೆಗೈದ ಆರೋಪಿ ಗಡಿ ದಾಟದಂತೆ ಎಲ್ಲೆಡೆ ನಾಗಾಬಂಧಿ ಹಾಕಲಾಗಿದ್ದು, ಘಟನಾ ಸ್ಥಳದಲ್ಲಿ ಖಾಲಿ ಕಾಟ್ರಿಜ್ ಪತ್ತೆಯಾಗಿದ್ದು, ಕೆಲ ಸಾಕ್ಷಿಗಳು ಪತ್ತೆಯಾಗಿವೆ. ತನಿಖೆ ತೀವ್ರಗೊಳಿಸಲಾಗಿದೆ ಎಂದು ಪೂರ್ವ ವಿಭಾಗದ ಪೂರ್ವ ಡಿಸಿಪಿ ಪ್ರಿಯಾಂಕಾ ಹೇಳಿದರು.












Click it and Unblock the Notifications