ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧನ: ಕಮಲದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
ನವದೆಹಲಿ, ಸೆಪ್ಟೆಂಬರ್ 17: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಆಡಳಿತಾರೂಢ ಬಿಜೆಪಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರ ಬಂಧನಕ್ಕೆ ಪ್ರತಿಕ್ರಿಯಿಸಿದ್ದಾರೆ. "ಗುಜರಾತ್‌ನಲ್ಲಿ ಅವರು ತುಂಬಾ ಬಳಲುತ್ತಿರುವಂತೆ ತೋರುತ್ತಿದೆ" ಎಂದು ಕೇಜ್ರಿವಾಲ್ ಬಿಜೆಪಿಯನ್ನು ಕುಟುಕಿದ್ದಾರೆ. ದೆಹಲಿ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳದಿಂದ ಎಎಪಿ ನಾಯಕನನ್ನು ಬಂಧಿಸಿದ ಒಂದು ದಿನದ ನಂತರ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ದೆಹಲಿ ವಕ್ಫ್ ಬೋರ್ಡ್ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ದಾಳಿಯ ನಂತರ ಅಮಾನತುಲ್ಲಾ ಖಾನ್ ಅವರನ್ನು ಬಂಧಿಸಲಾಯಿತು. ಕೇಜ್ರಿವಾಲ್ ಅವರು ಅಮಾನತುಲ್ಲಾ ಖಾನ್ ಅವರ ಬಂಧನವನ್ನು ವಿರೋಧಿಸಿ ಟ್ವೀಟ್ ಮಾಡಿದ್ದಾರೆ. "ಮೊದಲು ಅವರು ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿದರು. ಪದೇ ಪದೇ ನ್ಯಾಯಾಲಯಕ್ಕೆ ಮನವಿ ಮಾಡಿದರೂ ಯಾವುದೇ ಸಾಕ್ಷ್ಯವನ್ನು ಮಂಡಿಸಲು ಸಾಧ್ಯವಾಗಲಿಲ್ಲ. ನಂತರ ಮನೀಶ್ ಮನೆ ಮೇಲೆ ದಾಳಿ ನಡೆಸಿದರೂ ಏನೂ ಪತ್ತೆಯಾಗಿಲ್ಲ. ಈಗ ಅಮಾನತುಲ್ಲಾ ಅವರನ್ನು ಬಂಧಿಸಿದ್ದಾರೆ, ಇನ್ನೂ ಅನೇಕ ಶಾಸಕರನ್ನು ಬಂಧಿಸಲಾಗುವುದು'' ಎಂದು ಅವರು ಬರೆದಿದ್ದಾರೆ.

'ಬಿಜೆಪಿಗೆ ಸೋಲುವ ಭೀತಿ'
ವರ್ಷಾಂತ್ಯದಲ್ಲಿ ನಡೆಯುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸೋಲು ಭೀತಿಯಿಂದ ಬಿಜೆಪಿ ಎಎಪಿ ಪಕ್ಷವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂಬಾರ್ಥದಲ್ಲಿ ಕೇಜ್ರಿವಾಲ್ ಬಿಜೆಪಿಯನ್ನು ದೂರಿದ್ದಾರೆ. ಅಮಾನತುಲ್ಲಾ ಬಂಧನದ ಬಗ್ಗೆ ಎಎಪಿ ಕೂಡ ಪ್ರತಿಕ್ರಿಯಿಸಿದೆ ಮತ್ತು ಶಾಸಕರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ಪಕ್ಷಕ್ಕೆ ಮಾನಹಾನಿ ಮಾಡುವ ಸಂಚು ಇದು ಎಂದು ಹೇಳಿದೆ.
|
ಅಮಾನತುಲ್ಲಾ ಬಂಧನ
ಅಮಾನತುಲ್ಲಾ ಖಾನ್ ಅವರ ಆಪ್ತ ಸಹಾಯಕ ಮತ್ತು ವ್ಯಾಪಾರ ಪಾಲುದಾರ ಹಮೀದ್ ಅಲಿಯನ್ನು ದೆಹಲಿ ಪೊಲೀಸರು ಶನಿವಾರ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಿದ್ದಾರೆ. ಅವರ ನಿವಾಸದಿಂದ ಪೊಲೀಸರು ಪಿಸ್ತೂಲ್, ಕೆಲವು ಗುಂಡುಗಳು ಮತ್ತು 12 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ಅಮಾನತುಲ್ಲಾ ವಿಚಾರಣೆ ಬಳಿಕ ಬಂಧಿಸಲಾಗಿದೆ.

ಪರವಾನಗಿ ಪಡೆಯದ ಶಸ್ತ್ರಾಸ್ತ್ರ ವಶ
ಸೆಪ್ಟೆಂಬರ್ 16ರಂದು ದೆಹಲಿ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳವು ಎಎಪಿ ಶಾಸಕ ಅಮಾನತುಲ್ಲಾ ಖಾನ್ ಮತ್ತು ಅವರ ವ್ಯಾಪಾರ ಪಾಲುದಾರ ಹಮೀದ್ ಅಲಿ ಖಾನ್ ಮಸೂದ್ ಉಸ್ಮಾನ್ ಅವರ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿತು. ದಾಳಿಯ ವೇಳೆ ಅಧಿಕಾರಿಗಳು ಪರವಾನಗಿ ಪಡೆಯದ ಶಸ್ತ್ರಾಸ್ತ್ರ ಮತ್ತು 12 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ವಕ್ಫ್ ಬೋರ್ಡ್ ಅಕ್ರಮ ನೇಮಕಾತಿ
ದೆಹಲಿ ವಕ್ಫ್ ಬೋರ್ಡ್‌ನಲ್ಲಿ ಅಕ್ರಮ ನೇಮಕಾತಿ ನಡೆದಿದೆ ಎನ್ನಲಾದ ಎರಡು ವರ್ಷಗಳ ಹಿಂದಿನ ಭ್ರಷ್ಟಾಚಾರ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ವಿಚಾರಣೆ ನಡೆಸಿದೆ. ನಿನ್ನೆ (ಸೆಪ್ಟೆಂಬರ್ 16)ಮುಂಜಾನೆ ವಿಚಾರಣೆ ನಡೆಸಿದ ಬಳಿಕ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರ ಮನೆ ಮತ್ತು ಅವರಿಗೆ ಸಂಬಂಧಿಸಿದ ಐದು ಸ್ಥಳಗಳ ಮೇಲೆ ದಾಳಿ ನಡೆಸಿದೆ. ದೆಹಲಿ ವಕ್ಫ್ ಮಂಡಳಿಯಲ್ಲಿ ಅಕ್ರಮ ನೇಮಕಾತಿ ಆರೋಪದ ಮೇಲೆ ವಿಚಾರಣೆಗೆ ಹಾಜರಾಗುವಂತೆ ಖಾನ್ ಅವರಿಗೆ ನೋಟಿಸ್ ಕಳುಹಿಸಿತ್ತು. ವಿಚಾರಣೆ ವೇಳೆ ಖಾನ್ ಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ದಾಳಿ ನಡೆದಿದೆ. 2020ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓಖ್ಲಾ ಶಾಸಕರನ್ನು ವಿಚಾರಣೆಗೆ ಕರೆಯಲಾಗಿತ್ತು. ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ.












Click it and Unblock the Notifications