'ಅಭಿವೃದ್ಧಿ ಬಿಟ್ಟು ಮಂದಿರ, ಪ್ರತಿಮೆಯತ್ತ ಗಮನ, ಬಿಜೆಪಿಗೆ ಸೋಲು'
ನವದೆಹಲಿ, ಡಿಸೆಂಬರ್ 11 : ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ.
ಮಿಜೋರಾಂ ಹಾಗೂ ತೆಲಂಗಾಣ ಬಿಟ್ಟು ಮಿಕ್ಕ ಮೂರು ರಾಜ್ಯಗಳಾದ ಛತ್ತೀಸ್ ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಜಯಭೇರಿ ಬಾರಿಸುವ ಕನಸು ಭಗ್ನವಾಗಿದೆ. ಬಿಜೆಪಿ ಸೋಲಿನ ಪರಾಮರ್ಶೆ ಈಗ ಶುರುವಾಗಿದೆ.
ಮಧ್ಯಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವಿತ್ತು ಹಾಗೂ ರಾಜಸ್ಥಾನದಲ್ಲಿ ವಸುಂಧರಾ ರಾಜೇ ಅವರು ಎರಡನೇ ಅವಧಿಗೆ ಅಧಿಕಾರ ಬಯಸಿದ್ದರು.
ಆದರೆ, ಈಗಿನ ಟ್ರೆಂಡ್ ನಂತೆ ಎರಡು ಕೂಡಾ ಕಾಂಗ್ರೆಸ್ ಪಕ್ಷವು ಅಧಿಕಾರ ಸ್ಥಾಪಿಸುವ ಹಕ್ಕು ಪಡೆದುಕೊಂಡಿದೆ.

ಮಧ್ಯಪ್ರದೇಶದಲ್ಲಿ ಸರಳ ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 116 ದಾಟಿರುವ ಕಾಂಗ್ರೆಸ್ ಗೆ ಎಸ್ ಪಿ ಬೆಂಬಲವೂ ಸಿಕ್ಕಿದೆ. ರಾಜಸ್ಥಾನದಲ್ಲಿ 199 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 104 ಸ್ಥಾನಗಳಲ್ಲಿ ಮುಂದಿದೆ.
ಬಿಜೆಪಿ ಸೋಲಿನ ಬಗ್ಗೆ ಸಂಸದ: ರಾಜಸ್ಥಾನ ಹಾಗೂ ಛತ್ತೀಸ್ ಗಡದಲ್ಲಿ ನಮ್ಮ ಸೋಲು ನಿರೀಕ್ಷಿತವಾಗಿತ್ತು. ಆದರೆ, ಮಧ್ಯಪ್ರದೇಶದಲ್ಲಿ ಇದು ಅನಿರೀಕ್ಷಿತ ಬೆಳವಣಿಗೆ, ಫಲಿತಾಂಶ ಅಚ್ಚರಿ ತಂದಿದೆ ಎಂದು ರಾಜ್ಯಸಭಾ ಸದಸ್ಯ ಸಂಜಯ್ ಕಾಕಡೆ ಹೇಳಿದ್ದಾರೆ.
ಒಟ್ಟಾರೆ, ಐದು ರಾಜ್ಯಗಳ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿ, ನಾವು ಅಭಿವೃದ್ಧಿ ಪಥ ಬಿಟ್ಟು ಬೇರೆ ದಾರಿ ಹಿಡಿದಿದ್ದು ಮುಳುವಾಯಿತು. 2014ರಲ್ಲಿ ಅಧಿಕಾರಕ್ಕೆ ಬಂದಾಗ ಮೋದಿ ಅವರು ಹಾಕಿಕೊಟ್ಟ ದಾರಿಯನ್ನು ಮರೆತೆವು,
ರಾಮಮಂದಿರ ನಿರ್ಮಾಣ, ಪ್ರತಿಮೆ ಸ್ಥಾಪನೆ, ನಗರಗಳ ಹೆಸರು ಬದಲಾವಣೆ ಮುಂತಾದ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದು ಮತದಾರರಿಂದ ನಮ್ಮ ಅಭ್ಯರ್ಥಿಗಳು ದೂರ ಉಳಿಯುವಂತಾಯಿತು ಎಂದು ಕಾಕಡೆ ಅಭಿಪ್ರಾಯಪಟ್ಟಿದ್ದಾರೆ.
ಪುಣೆ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕಮ್ ರಾಜಕಾರಣಿ ಕಾಕಡೆ ಅವರು 2017ರ ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಪಕ್ಷದ ವಿರುದ್ಧ ಹರಿಹಾಯ್ದಿದ್ದರು.












Click it and Unblock the Notifications