ಅಂತೂ ಬಿಜೆಪಿಗೆ ಬರ್ತಾರೆ ಧನಂಜಯ್ ಕುಮಾರ್!
ನವದೆಹಲಿ, ಫೆ.6 : ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್ ಅವರು ಬಿಜೆಪಿ ಸೇರುವುದಕ್ಕೆ ಕೊನೆಗೂ ಬಿಜೆಪಿ ರಾಷ್ಟ್ರೀಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಅವರಿಗೆ ಸದ್ಯ ಯಾವುದೇ ಪಕ್ಷದಲ್ಲಿ ಯಾವುದೇ ಸ್ಥಾನಮಾನ ದೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗುರುವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಗುರುವಾರ ನವದೆಹಲಿಯಲ್ಲಿ ಕರ್ನಾಟಕ ಬಿಜೆಪಿ ಕೋರ್ ಕಮಿಟಿ ಸಭೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆಯಿತು. ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. [ಧನಂಜಯ್ ಕುಮಾರ್ ಅತಂತ್ರ]

ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ವಿರುದ್ಧ ಹಗುರವಾಗಿ ಮಾತನಾಡಿದ್ದ ಧನಂಜಯ್ ಕುಮಾರ್ ಮತ್ತು ಲೆಹರ್ ಸಿಂಗ್ ಅವರನ್ನು ಬಿಜೆಪಿಗೆ ಮರು ಸೇರ್ಪಡೆ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ಉಭಯ ನಾಯಕ ಪಕ್ಷ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದರು. ಆದರೆ, ಅವರಿಗೆ ಸದ್ಯ ಪಕ್ಷದಲ್ಲಿ ಯಾವುದೇ ಸ್ಥಾನ ಮಾನ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯಡಿಯೂರಪ್ಪ ಹೇಳಿದವರಿಗೆ ಟಿಕೆಟ್ : ಕೆಜೆಪಿಯಿಂದ ಬಿಜೆಪಿಗೆ ಮರಳಿರುವ ಬಿ.ಎಸ್.ಯಡಿಯೂರಪ್ಪ ಪಕ್ಷದೊಳಗೆ ಹಿಡಿತ ಸಾಧಿಸಿರುವುದು ಖಾತ್ರಿಯಾಗಿದೆ. ಕೋರ್ ಕಮಿಟಿ ಸಭೆಯಲ್ಲಿ 10 ರಿಂದ 12 ಕ್ಷೇತ್ರಗಳಲ್ಲಿ ಯಡಿಯೂರಪ್ಪ ಸೂಚಿಸಿದ ಅಭ್ಯರ್ಥಿಗಳಿಗೆ ಲೋಕಸಭೆ ಚುನಾವಣೆ ಟಿಕೆಟ್ ನೀಡಲು ಒಪ್ಪಿಗೆ ನೀಡಲಾಗಿದೆ. ಈ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವುದು ತಮ್ಮ ಜವಾಬ್ದಾರಿ ಎಂದು ಯಡಿಯೂರಪ್ಪ ನಾಯಕರಿಗೆ ಭರವಸೆ ನೀಡಿದ್ದಾರೆ.
ಫೆಬ್ರವರಿಯಲ್ಲಿ ರಾಜ್ಯದಲ್ಲಿ ನಡೆಯಲಿರುವ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮಾವೇಶಗಳನ್ನು ಯಶಸ್ವಿಗೊಳಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಮೊದಲು ರಾಜ್ಯಸಮಿತಿಯಲ್ಲಿ ಅಂತಿಮಗೊಳಿಸಿ ನಂತರ ವರಿಷ್ಠರಿಗೆ ಕಳಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. (ಮೋದಿ ಸಮಾವೇಶದ ವೇಳಾಪಟ್ಟಿ)












Click it and Unblock the Notifications