ಬೆಂಗಳೂರು ಮಹಿಳೆಗೆ ಸಂದ ಜಯ, 'ಹೊಲಸು' ಅಧಿಕಾರಿ ಸಸ್ಪೆಂಡ್
ನವದೆಹಲಿ, ಮಾ.27: ಹಾಂಕಾಂಗ್ ಗೆ ತೆರಳುತ್ತಿದ್ದ ಬೆಂಗಳೂರಿನ ಗೃಹಿಣಿಯೊಬ್ಬರಿಗೆ ಮಾನಸಿಕ ಕಿರುಕುಳ ನೀಡಿ ಕಾಮದೃಷ್ಟಿ ಬೀರಿದ್ದ ದೆಹಲಿ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿ ವಿನೋದ್ ಕುಮಾರ್ ಅವರನ್ನು ಶುಕ್ರವಾರ ಸಂಜೆ ಸಸ್ಪೆಂಡ್ ಮಾಡಲಾಗಿದೆ.
ಮಾ.18ರಂದು ದೆಹಲಿ ಮುಖಾಂತರ ಹಾಂಕಾಂಗ್ ಗೆ ತೆರಳುತ್ತಿದ್ದ ಬೆಂಗಳೂರಿನ ಗೃಹಿಣಿಯನ್ನು ವಿಚಾರಣೆ ನೆಪದಲ್ಲಿ ಹಿಂಸೆ ನೀಡಿದ್ದ ಅರೋಪ ಹೊತ್ತಿದ್ದ ವಲಸೆ ಸಹಾಯಕ ಅಧಿಕಾರಿ ವಿನೋದ್ ಕುಮಾರ್ ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ.
ಬೆಂಗಳೂರು ಗೃಹಿಣಿ ಈ ಘಟನೆ ಬಗ್ಗೆ ಸಂಪೂರ್ಣ ವಿವರಣೆ ನೀಡಿ ವಿಮಾನ ಪ್ರಾಧಿಕಾರ ಆಯುಕ್ತ ಪಿಕೆ ಭಾರದ್ವಾಜ್ ಹಾಗೂ ದೆಹಲಿ ವಿಮಾನ ನಿಲ್ದಾಣ ಕೇಂದ್ರಕ್ಕೆ ಇ ಮೇಲ್ ಮೂಲಕ ದೂರು ನೀಡಿದ್ದರು. ದೂರಿಗೆ ಪ್ರತಿಕ್ರಿಯೆ ನೀಡಿರುವ ಆಯುಕ್ತರು, ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ, ತನಿಖೆ ಮುಂದುವರೆದಿದೆ ಎಂದು ಉತ್ತರಿಸಿದ್ದಾರೆ.

ಮಾ.18, 21.30 ಸಮಯದಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬದಲಾವಣೆ ವಿಮಾನ (02.00 ಅವಧಿ) ಕ್ಕಾಗಿ ಕಾದಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಇಮಿಗ್ರೇಷನ್ ಅಧಿಕಾರಿ ವಿನೋದ್ ಕುಮಾರ್ ಕೇಳಿದ ಪ್ರಶ್ನೆಗಳ ಸ್ಯಾಂಪಲ್ ಈ ಕೆಳಗಿನಂತಿದೆ:
ನಿಮಗೆ ಎಷ್ಟು ಮಕ್ಕಳಿದ್ದಾರೆ, ನೀವು ಏನು ಕುಡಿಯುತ್ತೀರಿ, ಧೂಮಪಾನ ಮಾಡುತ್ತಿರಾ? ಚಿಕನ್ ತಿನ್ನುತ್ತೀರಾ? ಪರಪುರುಷನ ಜೊತೆ ಪಲ್ಲಂಗ ಹಂಚಿಕೊಳ್ಳುತ್ತಿರಾ? ನಿಮ್ಮ ಪತಿ ಉದ್ಯೋಗಕ್ಕೆ ಹೋದಾಗ ಏನು ಮಾಡುತ್ತೀರಿ? ಜನನ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೀರಾ? ಎಂದು ನಾಲ್ಕು ಬಾರಿ ಕೇಳಿದ ಅಧಿಕಾರಿ ಕೊನೆಗೆ ನಿಮ್ಮ ಮೂರನೇ ಮಗುವಿಗೆ ನಾನು ತಂದೆಯಾಗುತ್ತೇನೆ. ಹಾಂಕಾಂಗ್ ನಲ್ಲಿ ಒಬ್ಬರೇ ಇರುತ್ತೀರಾ? ನಿಮ್ಮ ಪರ್ಸನಲ್ ನಂಬರ್ ಕೊಡಿ ನಿಮ್ಮ ಪತಿ ಇಲ್ಲದಿರುವ ಸಂದರ್ಭದಲ್ಲಿ ಕಾಲ್ ಮಾಡುತ್ತೇನೆ ಎಂದು ನಗೆಯಾಡಿದ್ದಾನೆ.
ಮಾ.23ರಂದು ಹಾಂಕಾಂಗ್ ನಿಂದ ರಿಟರ್ನ್ ಆದ ಮೇಲೆ ಪತಿ ಜೊತೆಗೆ AFRRO ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ. ಅದರೆ, ದೂರು ಸ್ವೀಕರಿಸದ ಅಧಿಕಾರಿ ಆನ್ ಲೈನ್ ಮೂಲಕ ದೂರು ಸಲ್ಲಿಸುವಂತೆ ಹೇಳಿದ್ದಾರೆ. ಕೊನೆಗೂ ದೂರು ಸ್ವೀಕಾರಗೊಂಡು ಶುಕ್ರವಾರದಂದು ಅಧಿಕಾರಿ ಅಮಾನತುಗೊಂಡ ಸುದ್ದಿ ಬಂದಿದೆ.












Click it and Unblock the Notifications