ಬಾಟ್ಲಾಹೌಸ್ ಎನ್‌ಕೌಂಟರ್: ಅಪರಾಧಿ ಆರಿಜ್ ಖಾನ್‌ಗೆ ಗಲ್ಲು ಶಿಕ್ಷೆ
ನವದೆಹಲಿ, ಮಾರ್ಚ್ 15: ಬಾಟ್ಲಾಹೌಸ್ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಮುಜಾಹಿದ್ದೀನ್ ಸಂಘಟನೆಯ ಉಗ್ರ, ಅಪರಾಧಿ ಆರಿಜ್ ಖಾನ್‌ಗೆ ದೆಹಲಿ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಇದು ಅಪರೂಪದಲ್ಲಿಯೇ ಅಪರೂಪದ ಪ್ರಕರಣದ ವರ್ಗಕ್ಕೆ ಸೇರಿದ್ದು, ಖಾನ್‌ಗೆ ಮರಣದಂಡನೆ ಶಿಕ್ಷೆ ಅರ್ಹವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಆರಿಜ್ ಖಾನ್ ಮತ್ತವನ ಸಹಚರರು ಪೊಲೀಸ್ ಅಧಿಕಾರಿ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಅವರು ಮೃತಪಟ್ಟಿರುವುದು ಸಾಕ್ಷ್ಯಧಾರಾಗಳಿಂದ ದೃಢಪಟ್ಟಿರುವುದಾಗಿ ಹೆಚ್ಚುವರಿ ಸೆಷನ್ ನ್ಯಾಯಾಧೀಶ್ ಸಂದೀಪ್ ಯಾದವ್ ಹೇಳಿದರು.
ಈ ಹಿನ್ನೆಲೆಯಲ್ಲಿ ಆರಿಜ್ ಖಾನ್ ಗೆ ಮರಣದಂಡನೆ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದರು. ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆರಿಜ್ ಖಾನ್ ನನ್ನು ಫೆಬ್ರವರಿ 14, 2018ರಲ್ಲಿ ಬಂಧಿಸಲಾಗಿತ್ತು. ಇದೀಗ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾನೆ.

2008ರ ಸೆಪ್ಟೆಂಬರ್ 19ರ ಬೆಳಿಗ್ಗೆ 11ಗಂಟೆ ವೇಳೆಗೆ ದೆಹಲಿಯ ಜಾಮಿಯಾ ನಗರದ ಬಾಟ್ಲಾ ಹೌಸ್‌ನ ಪ್ಲಾಟ್ ನಂ. 108, ಎಲ್-18ರಲ್ಲಿ ಆರಿಜ್ ತನ್ನ ಸಹಚರ ಹಾಗೂ ಈಗಾಗಲೇ ಅಪರಾಧಿ ಎಂದು ಘೋಷಿತನಾಗಿರುವ ಶಹಜಾದ್ ಜೊತೆಗೂಡಿ ಉದ್ದೇಶಪೂರ್ವಕವಾಗಿ ಬಂದೂಕಿನಿಂದ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಮೇಲೆ ಹಲ್ಲೆ ನಡೆಸಿದ್ದ, ಸಾವಿಗೆ ಕಾರಣನಾಗಿದ್ದ.
ಅವರ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದಲ್ಲದೇ ಅವರ ಮೇಲೆ ದೌರ್ಜನ್ಯ ಎಸಗಿ, ಕ್ರಿಮಿನಲ್ ಗುಂಪಿನ ಮೂಲಕ ಇತರೆ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದನ್ನು ಪ್ರಾಸಿಕ್ಯೂಷನ್ ನಿರೂಪಿಸಿದೆ ಎಂದು ನ್ಯಾಯಾಲಯ ಹೇಳಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 186 (ಸರ್ಕಾರಿ ಸೇವೆಗೆ ಅಡ್ಡಿ)/ 333 ಉದ್ದೇಶಪೂರ್ವಕವಾಗಿ ಸರ್ಕಾರಿ ಅಧಿಕಾರಿಯನ್ನು ಗಾಯಗೊಳಿಸುವುದು)/ 353 ಸರ್ಕಾರಿ ಅಧಿಕಾರಿಯ ಮೇಲೆ ದೌರ್ಜನ್ಯ)/ 302 (ಕೊಲೆ)/ 307 (ಕೊಲೆ ಯತ್ನ)/ 34 (ಸಾಮಾನ್ಯ ಉದ್ದೇಶ) ಮತ್ತು ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 27 (ಶಸ್ತ್ರಾಸ್ತ್ರ ಬಳಕೆಗೆ ಶಿಕ್ಷೆ) ಹಾಗೂ ಐಪಿಸಿಯ ಸೆಕ್ಷನ್ 174ಎ ಅಡಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಸಾಕೇತ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಸಂಜೀವ್ ಯಾದವ್ ಅವರು ಈಚೆಗೆ ಖಾನ್‌ನನ್ನು ಅಪರಾಧಿ ಎಂದು ಘೋಷಿಸಿದ್ದರು.












Click it and Unblock the Notifications