ವಿಮಾನಯಾನ ಹಗರಣ: ಯುಪಿಎ ಸರ್ಕಾರದ ಮಾಜಿ ಸಚಿವ ಪ್ರಫುಲ್ ಪಟೇಲ್‌ಗೆ ಸಂಕಷ್ಟ
ನವದೆಹಲಿ, ಜೂನ್ 1: ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ 2008-09ರ ಅವಧಿಯಲ್ಲಿ ನಡೆದಿದೆ ಎನ್ನಲಾದ ವಿಮಾನಯಾನ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಆಗ ನಾಗರಿಕ ವಿಮಾನಯಾನ ಸಚಿವರಾಗಿದ್ದ ಪ್ರಫುಲ್ ಪಟೇಲ್ ಪ್ರಸ್ತುತ ರಾಜ್ಯಸಭೆ ಸದಸ್ಯರಾಗಿದ್ದಾರೆ. ಜೂನ್ 6ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸೂಚನೆ ನೀಡಿದೆ.
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಲಾಭದಾಯಕ ಮಾರ್ಗಗಳನ್ನು ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ವರ್ಗಾಯಿಸಲು ವಿಮಾನಯಾನ ಲಾಬಿಕೋರ ದೀಪಕ್ ತಲ್ವಾರ್ ಪಾತ್ರದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.

ಪ್ರಕರಣದ ಪ್ರಮುಖ ಆರೋಪಿ ದೀಪಕ್ ತಲ್ವಾರ್ ಮತ್ತು ಅವರ ಮಗ ಆದಿತ್ಯ ತಲ್ವಾರ್ ಅವರೊಂದಿಗೆ ಪ್ರಫುಲ್ ಪಟೇಲ್ ನಿಕಟ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿದೆ. ತಮಗೆ ಅನುಕೂಲಕರ ವಿಮಾನಯಾನ ಮಾರ್ಗಗಳನ್ನು ಪಡೆದುಕೊಳ್ಳಲು ಮೂರು ವಿದೇಶಿ ಸಂಸ್ಥೆಗಳಿಂದ ದೀಪಕ್ ತಲ್ವಾರ್ 272 ಕೋಟಿ ರೂಪಾಯಿ ಪಡೆದುಕೊಂಡಿದ್ದ ಎಂದು ಇಡಿ ಆರೋಪಪಟ್ಟಿಯಲ್ಲಿ ಆರೋಪಿಸಿದೆ.
ಎಮಿರೇಟ್ಸ್ ಮತ್ತು ಏರ್ ಅರೇಬಿಯಾದ ಪರವಾಗಿ ತಲ್ವಾರ್, ಪಟೇಲ್ ಅವರೊಂದಿಗೆ ಹಲವು ಬಾರಿ ಸಂವಹನ ನಡೆಸಿದ್ದ ಎಂದು ಹೇಳಿದೆ.
ಅಪ್ಪ-ಮಗ ಇಬ್ಬರ ವಿರುದ್ಧವೂ ಜಾಮೀಉ ರಹಿತ ವಾರಂಟ್ ಹೊರಡಿಸಲಾಗಿದೆ. ಇಬ್ಬರೂ ಆಂಟಿಗುವಾದಲ್ಲಿ ಇದ್ದಾರೆ ಎನ್ನಲಾಗಿದೆ.












Click it and Unblock the Notifications