ದಲಿತ ಪದಕ್ಕೆ ಬ್ರೇಕ್: ಸುಪ್ರೀಂ ಮೊರೆಹೋದ ಕೇಂದ್ರ ಸಚಿವ
ನವದೆಹಲಿ, ಸೆಪ್ಟೆಂಬರ್ 06: ಮಾಧ್ಯಮಗಳ 'ದಲಿತ' ಪದಪ್ರಯೋಗಕ್ಕೆ ಕಡಿವಾಣ ಹಾಕಿರುವ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಕ್ರಮವನ್ನು ಖಂಡಿಸಿ ಸ್ವತಃ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ.
'ದಲಿತ' ಎಂಬ ಪದಪ್ರಯೋಗ ಮಾಡದಂತೆ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿತ್ತು. 'ದಲಿತ' ಪದದ ಬದಲು ಪರಿಶಿಷ್ಟ ಜಾತಿ ಎಂಬ ಪದಪ್ರಯೋಗ ಮಾಡುವಂತೆ ಅದು ಸೂಚಿಸಿತ್ತು. ಪರಿಶಿಷ್ಠ ಜಾತಿ ಎಂಬುದು ಸಾಂವಿಧಾನಿಕ ಪದವಾಗಿದ್ದು, ಪ್ರಮಾಣಪತ್ರ ಮತ್ತು ಇನ್ನಿತರೆ ದಾಖಲೆಗಳಲ್ಲೂ ಅದನ್ನೇ ಬಳಸಿ ಎಂದೂ ಸರ್ಕಾರ ಸೂಚನೆ ನೀಡಿತ್ತು.

ಆದರೆ ಈ ಕುರಿತು ಪರಿಶಿಷ್ಟ ಜಾತಿಯ ಹಲವರು ಧ್ವನಿ ಎತ್ತಿದ್ದು, ದಲಿತ ಎಂಬುದು ಜಾತಿ ಸೂಚಕವಲ್ಲ, ಅದು ದೌರ್ಜನ್ಯಕ್ಕೊಳಗಾದವರಿಂದ ಆರಂಭವಾದ ಚಳವಳಿ ಎಂದಿದ್ದರು.ಬಾಂಬೆ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಈ ಸೂಚನೆ ನೀಡಿತ್ತು.
"ನಾವು ಕೋರ್ಟಿನ ನಿರ್ಧಾರಕ್ಕೆ ಗೌರವ ಕೊಡುತ್ತೇವೆ. ನಮ್ಮ ಸಚಿವಾಲಯವೂ ಈ ಪದಬಳಕೆಗೆ ಕಡಿವಾಣ ಹಾಕಿದೆ. ಆದರೆ ದಾಖಲೆಗಳಲ್ಲಿ ಈಗಾಗಲೇ ದಲಿತ ಪದದ ಬದಲು ಪರಿಶಿಷ್ಟ ಜಾತಿ ಎಂಬ ಪದಪ್ರಯೋಗ ಮಾಡಲಾಗುತ್ತಿದೆ. ಮಾಧ್ಯಮಗಳು ಆ ಪದವನ್ನು ಬಳಸದಂತೆ ಕಡಿವಾಣ ಹಾಕುವುದು ಸರಿ ಎಂದು ನನಗನ್ನಿಸುವುದಿಲ್ಲ. ಆದ್ದರಿಂದ ಬಾಂಬೆ ಹೈಕೋರ್ಟ್ ನ ಆದೇಶ ವಿರೋಧಿಸಿ ನಾನು ಸುಪ್ರೀಂ ಕೋರ್ಟ್ ಮೊರೆಹೋಗುತ್ತೇನೆ" ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ರಾಜ್ಯ ಸಚಿವ ಅಠಾವಳೆ ಹೇಳಿದ್ದಾರೆ.












Click it and Unblock the Notifications