ಕಾಂಗ್ರೆಸ್ಸಿಗೆ ಮತ ಹಾಕಬೇಡಿ ಎಂದ ಅರವಿಂದ್ ಕೇಜ್ರಿವಾಲ್
ನವದೆಹಲಿ, ಜನವರಿ 07: ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಯೋಚನೆಯಲ್ಲಿದ್ದ ಕಾಂಗ್ರೆಸ್ಸಿಗೆ ಭಾರೀ ಭ್ರಮನಿರಸನವಾಗಿದೆ.
ಲೋಕಸಭೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ಸಿಗೆ ಮತಹಾಕಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ!

ಕಕ್ರೋಲಾ ಎಂಬಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಕೇಜ್ರಿವಾಲ್ ಮಾತನಾಡುತ್ತಿದ್ದರು. "ಬಿಜೆಪಿಗೆ ಮತಹಾಕಬೇಡಿ. ಏಕೆಂದರೆ ದೆಹಲಿಯ ಎಲ್ಲಾ ಏಳು ಸಂಸದರೂ ರಾಜ್ಯಕ್ಕಾಗಿ ಏನನ್ನೂ ಮಾಡಿಲ್ಲ" ಎಂದು ಅವರು ದೂರಿದರು.
ಹಾಗೆಯೇ ಮುಂದುವರಿದು, "ಕಾಂಗ್ರೆಸ್ಸಿಗೂ ಮತಹಾಕಬೇಡಿ. ಏಕೆಂದರೆ ಕಾಂಗ್ರೆಸ್ಸಿಗೆ ಮತಹಾಕುವುದರಿಂದ ಮತ ಒಡೆಯುತ್ತದೆ. ಇದರಿಂದ ನರೇಂದ್ರ ಮೋದಿಯವರಿಗೇ ಲಾಭ. ಹಾಗಾಗದಂತೆ ಎಚ್ಚರಿಕೆ ವಹಿಸಿ" ಎಂದ ಅವರು, ಎಎಪಿಗೆ ಬೆಂಬಲ ನೀಡುವಂತೆ ಪರೋಕ್ಷವಾಗಿ ಮನವಿ ಮಾಡಿದರು.
ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ದ.ರಾಜೀವ್ ಗಾಂಧಿ ಅವರಿಗೆ ನೀಡಿದ ಭಾರತ ರತ್ನವನ್ನು ವಾಪಸ್ ಪಡೆಯಬೇಕೆಂದು ದೆಹಲಿ ವಿಧಾನಸಭೆಯಲ್ಲಿ ಮಹತ್ವದ ನಿರ್ಣಯ ಅಂಗೀಕರಿಸಲಾಗಿತ್ತು. ಎಎಪಿಯ ಈ ನಡೆ ಕಾಂಗ್ರೆಸ್ಸಿಗೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಬಿಜೆಪಿ ಕಾಂಗ್ರೆಸ್ಸಿನ ಬದ್ಧ ವೈರಿಯಾದರೂ, ರಾಜೀವ್ ಗಾಂಧಿ ಅವರಿಗೆ ನೀಡಿದ ಭಾರತ ರತ್ನ ವಾಪಸ್ ನೀಡಬೇಕು ಎಂಬೆಲ್ಲ ಬೇಡಿಕೆಯನ್ನು ಎಂದಿಗೂ ಇಟ್ಟಿರಲಿಲ್ಲ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿತ್ತು.












Click it and Unblock the Notifications