ಇನ್ಫಿ ಮೂರ್ತಿ ಸೆಳೆಯಲು ಅರವಿಂದ ಕೇಜ್ರಿವಾಲ್ ಯತ್ನ?
ಬೆಂಗಳೂರು, ಏ.4: ಇನ್ಫೋಸಿಸ್ ಸಂಸ್ಥೆ ಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಅವರನ್ನು ಆಮ್ ಆದ್ಮಿ ಪಕ್ಷಕ್ಕೆ ಸೇರಿಸಿಕೊಳ್ಳಲು ದೆಹಲಿ ಮುಖ್ಯಮಂತ್ರಿ ಉತ್ಸುಕರಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಅದರೆ, ರಾಜಕೀಯಕ್ಕೆ ಎಂಟ್ರಿ ಕೊಡಲು ನಾರಾಯಣ ಮೂರ್ತಿ ಅವರು ಇನ್ನೂ ಒಪ್ಪಿಗೆ ಕೊಟ್ಟಿಲ್ಲ.
ಆಮ್ ಆದ್ಮಿ ಪಕ್ಷದಲ್ಲಿರುವ ಐಟಿ ಗುರು ಆದರ್ಶ್ ಶಾಸ್ತ್ರಿ ಅವರ ಸಲಹೆ ಮೇರೆಗೆ ಅರವಿಂದ್ ಕೇಜ್ರಿವಾಲ್ ಅವರು ಇನ್ಫಿ ಮೂರ್ತಿ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ. ಕಳೆದ ಮಂಗಳವಾರ ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಜೊತೆ ಮಾತುಕತೆ ನಡೆಸಿಕೊಂಡು ಬಂದಿದ್ದಾರೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಅದರೆ, ಈ ಬಗ್ಗೆ ಹೆಚ್ಚಿಗೆ ಪ್ರತಿಕ್ರಿಯೆ ನೀಡದ ನಾರಾಯಣ ಮೂರ್ತಿ ಅವರು, ಅಕ್ಷಯ ಪಾತ್ರ ಎನ್ ಜಿಒ ಕಾರ್ಯಕ್ರಮಗಳ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ವಿವರಿಸಿದ್ದೇನೆ. ಸಾಮಾಜಿಕ ಕಾರ್ಯಕ್ರಮಗಳ ಸಾಕಷ್ಟು ಚರ್ಚೆ ನಡೆಸಿದ್ದೇವೆ. ರಾಜಕೀಯ ವಿಷಯದ ಬಗ್ಗೆ ಹೆಚ್ಚಿನ ಮಾತುಕತೆ ಏನೂ ನಡೆದಿಲ್ಲ ಎಂದಿದ್ದಾರೆ.

ಎಎಪಿ ಯೋಜನೆ ಏನು?: ದೆಹಲಿಯಲ್ಲಿರುವ ಸರ್ಕಾರಿ ಶಾಲೆಗಳ ನವೀಕರಣಕ್ಕೆ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಮುಂದಾಗಿದ್ದಾರೆ. ಇದಕ್ಕಾಗಿ ಎನ್.ಆರ್ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ನೆರವು ಕೋರಿದ್ದಾರೆ ಎಂದು ತಿಳಿದು ಬಂದಿದೆ. ಇದರಲ್ಲಿ ಅಕ್ಷಯ ಪಾತ್ರ ಮಧ್ಯಾಹ್ನದ ಬಿಸಿಯೂಟ ಯೋಜನೆಯೂ ಸೇರಿದೆ.
ಕಳೆದ ತಿಂಗಳು ಅರವಿಂದ್ ಕೇಜ್ರಿವಾಲ್ ಅವರು ಅಕ್ಷಯ ಪಾತ್ರ ಯೋಜನೆ ಬಗ್ಗೆ ತಿಳಿಯಲು ಬೆಂಗಳೂರಿಗೆ ಭೇಟಿ ನೀಡಿದ್ದರು ಎಂಬ ವಿಷಯವನ್ನು ಸಂಸ್ಥೆಯ ವಕ್ತಾರರು ಹೇಳಿದ್ದಾರೆ.2020ರ ವೇಳೆಗೆ ಸುಮಾರು 50 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ಗುರಿ ಹೊಂದಿದೆ.
ದೆಹಲಿ ಸರ್ಕಾರದ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಇನ್ಫೋಸಿಸ್ ಫೌಂಡೇಷನ್ ಮೂಲಕ ನೆರವು ನೀಡಲು ಇನ್ಫಿ ಮೂರ್ತಿ ಮುಂದಾಗುವ ಸಾಧ್ಯತೆ ಹೆಚ್ಚಿದೆ. ಅದರೆ, ಆಮ್ ಆದ್ಮಿ ಪಕ್ಷದ ತಾಂತ್ರಿಕ ಮಂಡಳಿಗೆ ಸೇರ್ಪಡೆಯಾಗುವುದರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ರಾಜಕೀಯದಿಂದ ಸದಾ ಕಾಲ ದೂರು ಉಳಿಯಲು ಬಯಸುವ ನಾರಾಯಣ ಮೂರ್ತಿ ಅವರೇ ಈ ಬಗ್ಗೆ ಕೊನೆ ನಿರ್ಣಯ ಕೈಗೊಳ್ಳಬೇಕಿದೆ.
ಇನ್ಫೋಸಿಸ್ ನ ಮಾಜಿ ನಿರ್ದೇಶಕ ವಿ ಬಾಲಕೃಷ್ಣನ್ ಅವರು ಎಎಪಿ ಟಿಕೆಟ್ ಪಡೆದು ಬೆಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications