ಕಣಿವೆ ರಾಜ್ಯದಲ್ಲಿ ಕಲ್ಲು ತೂರಿದ್ದಕ್ಕೆ 765 ಮಂದಿ ಬಂಧನ!
ದೆಹಲಿ, ನವೆಂಬರ್.19: ಕೇಂದ್ರ ಸರ್ಕಾರದ ಅದೊಂದು ತೀರ್ಮಾನ ಕಣಿವೆ ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿತ್ತು. ಜಮ್ಮು-ಕಾಶ್ಮೀರದಲ್ಲಿ ಜನರು ಮನೆಯಿಂದ ಹೊರ ಬರುವುದಕ್ಕೂ ಭಯ ಪಡುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆಲ್ಲ ಕಾರಣವಾಗಿದ್ದೇ 370ನೇ ವಿಧಿ ರದ್ದತಿ.
ಹೌದು, ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಈ ಸಂಬಂಧ ಸಂಸತ್ ಉಭಯ ಸದನಗಳಲ್ಲಿ ತಿದ್ದುಪಡಿ ಮಂಡನೆ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ಜಮ್ಮು-ಕಾಶ್ಮೀರದಲ್ಲಿ ಪೊಲೀಸರು ಹಾಗೂ ಸೇನಾ ಪಡೆ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದರು.
ಆಗಸ್ಟ್.5 ರಿಂದ ನವೆಂಬರ್.15ರವರೆಗೆ ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಪ್ರಕರಣಗಳು ನಡೆದಿದ್ದವು. ಈ ಸಂಬಂಧ 765 ಜನರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಜಿ.ಕಿಶಿನ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಜಿ.ಕಿಶಿನ್ ರೆಡ್ಡಿ ಕಲ್ಲು ತೂರಾಟ ಹಿನ್ನೆಲೆ 190 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 765 ಜನರನ್ನು ಬಂಧಿಸಲಾಗಿತ್ತು ಎಂದು ಮಾಹಿತಿ ನೀಡಿದರು. ಇನ್ನು, ಜಮ್ಮು-ಕಾಶ್ಮೀರದಲ್ಲಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಜನವರಿ.1ರಿಂದ ಆಗಸ್ಟ್.4ರ ಅವಧಿಯಲ್ಲಿ 361 ಪ್ರಕರಣಗಳು ದಾಖಲಾಗಿವೆ ಎಂದರು.
ಕಳೆದ ಆರು ತಿಂಗಳ ಅವಧಿಯಲ್ಲಿ ಜಮ್ಮು-ಕಾಶ್ಮೀರಕ್ಕೆ 34, ಲಕ್ಷ 10 ಸಾವಿರ 219 ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಪೈಕಿ 12 ಸಾವಿರದ 934 ಮಂದಿ ವಿದೇಶಿಗರಾಗಿದ್ದಾರೆ. ಪ್ರವಾಸಿಗರ ಭೇಟಿಯಿಂದ ಕಳೆದ ಆರು ತಿಂಗಳ ಅವಧಿಯಲ್ಲಿ 25.12 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications