ಹಿಂಸಾಚಾರಿಗಳಿಗೆ ನಾಯಕತ್ವದ ಪಾಠ ಮಾಡಿದ ಬಿಪಿನ್ ರಾವತ್
ದೆಹಲಿ, ಡಿಸೆಂಬರ್.26: ದೇಶದಲ್ಲಿ ಹಿಂಸಾಚಾರ ನಡೆಸುವುದು ಸಾರ್ವಜನಿಕ ಆಸ್ತಿ ಪಾಸ್ತಿಗೆ ಬೆಂಕಿ ಹಚ್ಚುವುದನ್ನು ಯಾರೂ ನಾಯಕತ್ವ ಅಂತಾ ಹೇಳುವುದಿಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕಿಡಿ ಕಾರಿದ್ದಾರೆ.
ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಬೃಹತ್ ಹೋರಾಟ ನಡೆಯುತ್ತಿದೆ. ಆದರೆ, ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚಾರ ನಡೆಸಲಾಗುತ್ತಿದೆ. ದೇಶದ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡುತ್ತಿರುವುದು ಎಂತಹ ಹೋರಾಟ ಎಂದು ರಾವತ್ ಪ್ರಶ್ನೆ ಮಾಡಿದ್ದಾರೆ.
ದೇಶದ ಜನರನ್ನು ಸನ್ಮಾರ್ಗದಲ್ಲಿ ನಡೆಸಿಕೊಂಡು ಹೋಗುವುದೇ ನಿಜವಾದ ನಾಯಕತ್ವ. ಸೂಕ್ತ ಮಾರ್ಗದರ್ಶನ ಮೂಲಕ ಹೋರಾಟ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಕೆಲವು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳನ್ನು, ಸಿಬ್ಬಂದಿಯನ್ನು ಬಳಸಿಕೊಂಡು ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ಬಿಪಿನ್ ರಾವತ್ ಕಿಡಿ ಕಾರಿದ್ದಾರೆ.

ಹಿಂಸಾಚಾರಕ್ಕೆ ಪ್ರೇರೇಪಿಸುವುದು ನಾಯಕತ್ವವಲ್ಲ:
ದೇಶದಲ್ಲಿ ಜನರನ್ನು ತಪ್ಪು ಮಾರ್ಗದಲ್ಲಿ ನಡೆಸುವುದೇ ನಿಜವಾದ ನಾಯಕತ್ವ ಅಲ್ಲ. ಇಂದು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ದಾರಿ ತಪ್ಪಿಸುವ ಕೆಲಸಗಳು ನಡೆಯುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಹಾಗೂ ಜನರನ್ನೆಲ್ಲ ಸೇರಿಸಿಕೊಂಡು ಹಿಂಸಾಚಾರ ನಡೆಸಲಾಯಿತು. ಇದನ್ನು ನಾಯಕತ್ವ ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ವಾಗ್ದಾಳಿ ನಡೆಸಿದರು.

ತಪ್ಪಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದಿದ್ದ ಮೋದಿ:
ಡಿಸೆಂಬರ್.25ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಹಿಂಸಾಚಾರ ನಡೆಸಿದವರ ಬಗ್ಗೆ ಮಾತನಾಡಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಹೋರಾಟ ಮಾಡುತ್ತೀರಾ. ಆದರೆ, ಪ್ರತಿಭಟನೆ ಹೆಸರಿನಲ್ಲಿ ದೇಶದ ಆಸ್ತಿ ಪಾಸ್ತಿಗಳಿಗೆ ಧಕ್ಕೆ ಉಂಟು ಮಾಡುವುದು ಎಷ್ಟು ಸರಿಯೋ ತಪ್ಪೋ ಎಂದು ನೀವೇ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕರೆ ನೀಡಿದ್ದರು.












Click it and Unblock the Notifications