ಕಡೆಗೂ ಅರವಿಂದ್‌ರನ್ನು ಆಶೀರ್ವದಿಸಿದ ಅಣ್ಣಾ ಹಜಾರೆ
ನವದೆಹಲಿ, ಡಿ. 8 : ತಮ್ಮ ಇಚ್ಛೆಗೆ ವಿರುದ್ಧವಾಗಿ ರಾಜಕೀಯ ಪಕ್ಷ ಕಟ್ಟಿದ್ದಕ್ಕಾಗಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮೇಲೆ ಕೆಂಡ ಕಾರುತ್ತಿದ್ದ ಭ್ರಷ್ಟ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ಕಡೆಗೂ ಕೇಜ್ರಿವಾಲ್ ಅವರಿಗೆ ಶಾಭಾಸ್ ಗಿರಿ ನೀಡಿದ್ದಾರೆ. ಆಮ್ ಆದ್ಮಿ ಪಕ್ಷ ಜಯದಿಂದ ತುಂಬಾ ಸಂತೋಷವಾಗಿದೆ ಎಂದು ಮನತುಂಬಿ ಹೇಳಿದ್ದಾರೆ.
ದೆಹಲಿಯಲ್ಲಿ ಶೀಲ್ ದೀಕ್ಷಿತ್ ಅವರ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿ 70ರಲ್ಲಿ 27 ಸ್ಥಾನಗಳನ್ನು ಕಬಳಿಸಲು ಸಿದ್ಧವಾಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಅಣ್ಣಾ ಹಜಾರೆ ಅವರು ಮನಃಪೂರ್ವಕವಾಗಿ ಅಭಿನಂದಿಸಿದ್ದಾರೆ. ಅರವಿಂದ್ ಅವರು ಇತಿಹಾಸ ನಿರ್ಮಿಸಿದ್ದಾರೆ ಎಂದಿರುವ ಅವರು, ಇದು ಕೇಜ್ರಿವಾಲ್ ಅವರಿಗೆ ಸಿಕ್ಕ ಸಂಪೂರ್ಣ ವಿಜಯವೂ ಅಲ್ಲ ಎಂದು ಕಿವಿಮಾತನ್ನು ಹೇಳಿದ್ದಾರೆ.
ಅರವಿಂದ್ ಅವರಿಗೆ ಜನರು ಸಂಪೂರ್ಣವಾಗಿ ಬೆಂಬಲಿಸಿಲ್ಲ. ಒಂದು ವೇಳೆ ಅಧಿಕಾರ ಗಳಿಸಬೇಕಾದರೆ ಒಂದಿಲ್ಲೊಂದು ಪಕ್ಷದ ಕೈಯನ್ನು ಅವರು ಹಿಡಿಯಲೂ ಬೇಕಾಗುತ್ತದೆ. ಇದರಿಂದ ಭ್ರಷ್ಟಾಚಾರ ಹೆಚ್ಚುತ್ತದೆಯೇ ಹೊರತು, ಭ್ರಷ್ಟಾಚಾರದ ವಿರುದ್ಧ ಅರವಿಂದ್ ಕೇಜ್ರಿವಾಲ್ ನಡೆಸುತ್ತಿರುವ ಹೋರಾಟಕ್ಕೆ ಎಂದು ಜಯ ಸಿಗುವುದಿಲ್ಲ ಎಂದು ಅವರು ವಿಶ್ಲೇಷಿಸಿದರು. [ಅರವಿಂದ್ ಗೆ ಟ್ವಿಟ್ಟಿಗರ ಶ್ಲಾಘನೆ]

ಅರವಿಂದ್ ಪಕ್ಷ ದೆಹಲಿ ಗದ್ದುಗೆ ಏರದಿದ್ದರೂ ಪರವಾಗಿಲ್ಲ, ಯಾರೊಂದಿಗೂ ಕೈಜೋಡಿಸಬಾರದು. ವಿಧಾನಸಭೆ ಅತಂತ್ರವಾಗಿ ಮತ್ತೆ ಚುನಾವಣೆ ಘೋಷಣೆಯಾದರೂ ಚಿಂತೆಯಿಲ್ಲ, ಅನೈತಿಕ ಮೈತ್ರಿಯನ್ನು ಯಾವ ಪಕ್ಷದೊಂದಿಗೂ ಮಾಡಬಾರದು. ಎಎಪಿ ಮತ್ತೆ ಚುನಾವಣೆ ಎದುರಿಸಲಿ ಮತ್ತು ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿ ಎಂದು ಅಣ್ಣಾ ಅರವಿಂದ್ ಅವರಿಗೆ ಕಿವಿಮಾತು ಹೇಳಿದ್ದಾರೆ.
ಅರವಿಂದ್ ಅವರು ಮುಂದೊಂದು ದಿನ ದೆಹಲಿ ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂಬ ಆಶಾಭಾವನೆಯನ್ನೂ ಅಣ್ಣಾ ಹಜಾರೆ ವ್ಯಕ್ತಪಡಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಶೀಲಾ ದೀಕ್ಷಿತ್ ವಿರುದ್ಧ 10 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಭೇರಿ ಬಾರಿಸಿದ್ದಾರೆ. [ದೆಹಲಿ ಚುನಾವಣಾ ಫಲಿತಾಂಶ ಲೈವ್]
ಆಮ್ ಆದ್ಮಿ ಪಕ್ಷದ ಗೆಲುವಿನಿಂದ ಖಂಡಿತ ಸಂತೋಷವಾಗಿದೆ. ಅದಕ್ಕಿಂತಲೂ ಹೆಚ್ಚಿನ ಖುಷಿ ಆಗಿದ್ದು ಶೀಲಾ ದೀಕ್ಷಿತ್ ಅವರ ಸೋಲಿನಿಂದ. ಏಕೆಂದರೆ, ಕಾಂಗ್ರೆಸ್ ಕೈಯಲ್ಲಿ ಸಾಕಷ್ಟು ದುಡ್ಡಿತ್ತು. ಆದರೂ ಅರವಿಂದ್ 27 ಸ್ಥಾನಗಳನ್ನು ಗೆದ್ದಿದ್ದಾರೆ. ಅವರಿಂದ ಒಂದು ಕ್ರಾಂತಿ ಶುರುವಾಗಿದೆ. ಒಂದು ಕೈಯಲ್ಲಿ ಪೊರಕೆಯನ್ನು ಎತ್ತಿಹಿಡಿದು ಒಂದು ಬಲಿಷ್ಠವಾದ ಪಕ್ಷವನ್ನು ಸದೆಬಡಿಯುವುದು ಸಾಮಾನ್ಯ ಮಾತಲ್ಲ.
ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಪನಿಶ್ಮೆಂಟ್ ನೀಡುತ್ತಿರುವುದು ಈ ಚುನಾವಣೆ ಫಲಿತಾಂಶದಲ್ಲಿ ಸಾಬೀತಾಗಿದೆ. ಇನ್ನು ಮುಂದೆ ಲೋಕಸಭಾ ಚುನಾವಣೆಯಲ್ಲಿಯೂ ಜನರು ಕಾಂಗ್ರೆಸ್ ಗೆ ಪಾಠ ಕಲಿಸಲಿದ್ದಾರೆ. ಜನ ಲೋಕಪಾಲ್ ಮಸೂದೆಯನ್ನು ಮಂಡಿಸದಿದ್ದಕ್ಕೆ ಜನರು ಕಾಂಗ್ರೆಸ್ಸಿಗೆ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಅವರು ನುಡಿದರು.












Click it and Unblock the Notifications