ಇದು ಯುಪಿಎ ಸರ್ಕಾರದ ವಿದಾಯದ ಬಜೆಟ್!
ನವದೆಹಲಿ, ಫೆ.18 : ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮಂಡಿಸಿದ್ದು ಯುಪಿಎ ಸರ್ಕಾರದ ವಿದಾಯದ ಬಜೆಟ್ ಮತ್ತು ಕಾಗದದ ಬಜೆಟ್. ಬಜೆಟ್ ನಲ್ಲಿ ಕೇಂದ್ರ ಸರ್ಕಾರ ನೈಜತೆಯ ಅಂಕಿ ಅಂಶಗಳನ್ನು ಮರೆಮಾಚಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅನಂತ್ ಕುಮಾರ್ ಕೇಂದ್ರ ಬಜೆಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾನ್ಯ ಹಣಕಾಸು ಸಚಿವರು ಸಂವಿಧಾನದ 116ನೇ ಅನುಚ್ಛೇದದ ಪ್ರಕಾರ ಲೇಖಾನುದಾನ ಮಾತ್ರ ಮಂಡಿಸಬೇಕಾಗಿತ್ತು. ಆದರೆ ಅದನ್ನು ಮೀರಿ ವಿವಿಧ ಘೋಷಣೆಗಳನ್ನು ಮಾಡಿರುವುದು ದುರಾದೃಷ್ಟಕರವಾಗಿದೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ. [ಚಿದಂಬರಂ ಬಜೆಟ್ ಮುಖ್ಯಾಂಶಗಳು]

ಯುಪಿಎ ಸರ್ಕಾರ ಬಜೆಟ್ ಮೂಲಕ ಕಾಗದದಲ್ಲಿ ಅನೇಕ ಸಂಗತಿಗಳನ್ನು ನೀಡಿದೆ. ಅಭಿವೃದ್ಧಿ ಮತ್ತು ಸಾಮಾಜಿಕ ವಲಯಗಳನ್ನು ನೋಡಿದರೆ ಅದು ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಉದ್ಯೋಗ ಮತ್ತು ಬಡತನ ನಿವಾರಣೆ ಹೀಗೆ ಎಲ್ಲ ವಲಯಗಳಲ್ಲೂ ಹಿಂದುಳಿದಿದೆ ಆದ್ದರಿಂದ ಬಜೆಟ್ ಮೂಲಕ ಯುಪಿಎ ನೈಜ ಅಂಕಿ ಅಂಶಗಳನ್ನು ಮರೆಮಾಚಿದೆ ಎಂದು ಆರೋಪಿಸಿದರು.
ಹಲವಾರು ಅಭಿವೃದ್ಧಿ ಸಾಧಿಸಿರುವ ಹಣಕಾಸು ಸಚಿವರು ಮತ್ತು ಯುಪಿಎ ನಿಜ ಹೇಳುವುದರಲ್ಲಿ ಮಾತ್ರ ಹಿಂದುಳಿದಿದ್ದಾರೆ. ಪೆನ್ಷನ್ ಪ್ರಕಟಣೆ 2014-15ರ ವಿತ್ತೀಯ ವರ್ಷದಲ್ಲಿ ಜಾರಿಯಾಗಬಹುದಾದ ಕಣ್ಣೊರೆಸುವ ತಂತ್ರಮಾತ್ರ. 10 ವರ್ಷ ಆಡಳಿತ ನಡೆಸಿದ ಯುಪಿಎ ಸರ್ಕಾರ ದೇಶವನ್ನು ದಿವಾಳಿಯಾಗಿಸಿದೆ ಎಂದು ಅನಂತ್ ಕುಮಾರ್ ಕುಟುಕಿದರು.
ಕಳೆದ ವರ್ಷದ ಬಜೆಟ್‍ನಲ್ಲಿ ಪ್ರಕಟಿಸಿದ್ದ ಬೆಂಗಳೂರು-ಚೆನ್ನೈ ಹಾಗೂ ಬೆಂಗಳೂರು-ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್ ಈ ವರ್ಷವೂ ಇನ್ನೂ ಸಜ್ಜಾಗುವ ಹಂತಗಳಲ್ಲಿವೆ. ಎಲ್ಲ ಮೆಟ್ರೋಗಳಿಗೆ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಆದರೆ ಬೆಂಗಳೂರಿಗೆ ಆಗ್ರಹಿಸಲಾಗಿದ್ದ 5000 ಕೋಟಿ ರೂ. ಪ್ಯಾಕೇಜ್ ಅನ್ನು ಯುಪಿಎ ಸತತವಾಗಿ ನಿರ್ಲಕ್ಷಿಸುತ್ತಾ ಬಂದಿದೆ ಎಂದು ದೂರಿದರು. [ಮುಂಬೈ-ಬೆಂಗಳೂರು ಕಾರಿಡಾರ್ ಯೋಜನೆ]
2004ರಲ್ಲಿ ಯುಪಿಎ ಸರ್ಕಾರ ರಚನೆಯಾದಾಗ ಪ್ರಗತಿ ಶೇ.8.5ರಷ್ಟಿತ್ತು. ಈ ವರ್ಷ ಶೇ.4.5ರಲ್ಲಿ ದೇಶವನ್ನು ಉಳಿಸಿದ್ದಾರೆ. ಕೈಗಾರಿಕಾ ಕೆಲಸಗಾರರ ಗ್ರಾಹಕ ಬೆಲೆ ಸೂಚಿ 2003-04ರಲ್ಲಿ ಶೇ.3.9ರಷ್ಟಿದ್ದು 2013-14ರಲ್ಲಿ ಶೇ.10.8ಕ್ಕೆ ಏರಿಕೆಯಾಗಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ದೇಶೀಯ ಹೂಡಿಕೆ 2010-11ರಲ್ಲಿ 17.3 ಲಕ್ಷ ಕೋಟಿ ರೂ.ನಿಂದ 2012-13ಕ್ಕೆ 5.6 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ಅನಂತ ಕುಮಾರ್ ವಿಶ್ಲೇಷಿಸಿದರು.
ಜನಸಮಾನ್ಯರು, ಹೂಡಿಕೆದಾರರು, ಉದ್ಯಮಿಗಳಿಗೆ ಯುಪಿಎ ಸರ್ಕಾರ ಡಾ.ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಬಗ್ಗೆ ಸ್ವಲ್ಪವೂ ವಿಶ್ವಾಸ ಉಳಿದಿಲ್ಲ. ಈ ಬಜೆಟ್ ಆಡಳಿತ ಹೇಗೆ ನಡೆಸಬೇಕು ಎಂಬುದನ್ನು ಮರೆತ ಯುಪಿಎ ಸರ್ಕಾರದ ಹತಾಶ ಸ್ಥಿತಿಯನ್ನು ತೋರಿಸುತ್ತದೆ. ಸರ್ಕಾರ ಏನನ್ನು ಸಾಧಿಸಬಹುದಾಗಿತ್ತು ಎಂದು ಪರೀಕ್ಷಿಸುವ ಕಾಲ ಈಗ ಬಂದಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications