ರಾಜೀವ್ ಹಂತಕರ ಬಿಡುಗಡೆ ಭಾಗ್ಯಕ್ಕೆ ಸುಪ್ರೀಂ ಕೊಕ್ಕೆ
ನವದೆಹಲಿ, ಫೆ.27: ನಾಟಕೀಯ ಬೆಳವಣಿಗೆಯೊಂದರಲ್ಲಿ ಕಳೆದ ವಾರ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ್ದ ಎಲ್ಲಾ ಏಳು ಆರೋಪಿಗಳನ್ನು ಜೈಲಿಂದ ಬಿಡುಗಡೆ ಮಾಡುವ ಸಂಬಂಧ ಜಯಲಲಿತಾ ಸಂಪುಟ ತೆಗೆದುಕೊಂಡಿದ್ದ ದಿಢೀರ್ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಕಿಡಿಕಾರಿದೆ.
ಮಾಜಿ ಪ್ರಧಾನ ಮಂತ್ರಿಯ ಹತ್ಯೆಯಂತಹ ಗಂಭೀರ ಪ್ರಕರಣದಲ್ಲಿ ತಮಿಳುನಾಡು ಸರಕಾರದ ಇಚ್ಛಾನುಸಾರ ಪಾತಕಿಗಳನ್ನು ಬಿಡುಗಡೆ ಮಾಡಬಾರದು ಎಂದು ಇಂದು ತಾಕೀತು ಮಾಡಿರುವ ಸುಪ್ರೀಂಕೋರ್ಟ್, ಹಂತಕರ ಬಿಡುಗಡೆ ನಿರ್ಣಯ ತೆಗೆದುಕೊಂಡಿದ್ದ ಮುಖ್ಯಮಂತ್ರಿ ಜಯಲಲಿತಾಗೆ ನೋಟಿಸ್ ನೀಡಿದೆ. ಇದರಿಂದ ಲೋಕಸಭಾ ಚುನಾವಣೆಯತ್ತ ದಾಪುಗಾಲು ಹಾಕಿರುವ ಜೆ ಜಯಲಲಿತಾಗೆ ಭಾರಿ ಹಿನ್ನಡೆಯಾಗಿದೆ.
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಅಪರಾಧಿಗಳಾದ ಮುರಗನ್, ಪೆರಾರಿ ವೇಲನ್ ಮತ್ತು ಸಂತನ್ ಅವರುಗಳ ಬಿಡುಗಡೆಗೆ ಸುಪ್ರೀಂಕೋರ್ಟ್ ಈಗಾಗಲೇ (ಫೆ. 20) ತಡೆಯಾಜ್ಞೆ ನೀಡಿತ್ತು.
ಈ ಮುಂಚೆ ಪ್ರಕರಣದ ಮೂವರು ಅಪರಾಧಿಗಳ ಬಿಡುಗಡೆಗೆ ತಡೆಯಾಜ್ಞೆ ನೀಡಿದ್ದ ಸುಪ್ರೀಂ ಕೋರ್ಟ್ ಮುರುಗನ್ ಪತ್ನಿ ನಳಿನಿ ಶ್ರೀಹರನ್, ರಾಬರ್ಟ್ ಪಯಾಸ್, ಜಯಕುಮಾರ್ ಮತ್ತು ರವಿಚಂದ್ರನ್ ಬಿಡುಗಡೆಗೂ ಇಂದು ಗುರುವಾರ ತಡೆ ನೀಡಿದೆ.

ಪ್ರಕರಣದ ಏಳು ಹಂತಕರ ಬಿಡುಗಡೆ ತಮಿಳುನಾಡು ಸರಕಾರ ನಿರ್ಧರಿಸಿತ್ತು. ತಮಿಳುನಾಡು ಸರಕಾರದ ನಿರ್ಧಾರ ಪ್ರಶ್ನಿಸಿ ಕೇಂದ್ರ ಸರಕಾರ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಕಳೆದ ವಾರ ಮೂವರ ಬಿಡುಗಡೆಗೆ ತಡೆ ನೀಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರಕಾರವು ಉಳಿದ ನಾಲ್ವರು ಬಿಡುಗಡೆಗೂ ಅವಕಾಶ ನೀಡದಂತೆ ಸುಪ್ರೀಂಕೋರ್ಟಿನಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿತ್ತು.
ಇಂದು ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನಾಯಮೂರ್ತಿ ಪಿ ಸದಾಶಿವಂ ಅವರು, ಪ್ರಕರಣ ಇತರ ನಾಲ್ವರು ಅಪರಾಧಿಗಳ ಬಿಡುಗಡೆಗೂ ತಡೆ ನೀಡಿ, ಪ್ರಕರಣದ ವಿಚಾರಣೆಯನ್ನು ಮಾರ್ಚ್ 6 ಕ್ಕೆ ಮುಂದೂಡಿದ್ದಾರೆ.
ನಳಿನಿ ಶ್ರೀಹರನ್ ಸೇರಿದಂತೆ ಸಂತನ್, ಮುರಗನ್ ಮತ್ತು ಪೆರಾರಿ ವೇಲನ್ ಅವರ ಗಲ್ಲು ಶಿಕ್ಷೆಯನ್ನು ಫೆ. 18 ರಂದು ಸುಪ್ರೀಂಕೋರ್ಟ್ ಜೀವಾವಧಿಗೆ ಇಳಿಸಿತ್ತು. ಇದಾದ ಮಾರನೇ ದಿನವೇ ತಮಿಳುನಾಡು ಸರ್ಕಾರ ರಾಜೀವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಏಳೂ ಅಪರಾಧಿಗಳನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿತ್ತು.
ಸಂತನ್, ಮುರಗನ್ ಮತ್ತು ಪೆರಾರಿ ವೇಲನ್ ಅವರುಗಳು ಪ್ರಸ್ತುತ ವೆಲ್ಲೂರು ಕೇಂದ್ರ ಕಾರಾಗೃಹದಲ್ಲಿದ್ದಾರೆ (1991ರಿಂದ). ಉಳಿದ ನಾಲ್ವರು ಶ್ರೀಪೆರಂಬದೂರು ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. 1991ರ ಮೇ 21ರಂದು ಶ್ರೀಪೆರಂಬದೂರು ಸಮೀಪ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಾಗಿತ್ತು. ಆ ಬಾಂಬ್ ಸ್ಫೋಟದಲ್ಲಿ ಇನ್ನೂ 14 ಮಂದಿ ಪ್ರಾಣ ತೆತ್ತಿದ್ದರು.












Click it and Unblock the Notifications