ಮೈತ್ರಿ ಬಿಟ್ಟು ಹೋಗಲು ಸ್ವತಂತ್ರರು- ಅಖಿಲೇಶ್ ಯಾದವ್
ನವದೆಹಲಿ, ಜುಲೈ 23: ತಮ್ಮದೇ ಮೈತ್ರಿ ಪಕ್ಷದ ವಿರುದ್ಧ ಮಾತನಾಡುತ್ತಿರುವ ಶಿವಪಾಲ್ ಸಿಂಗ್ ಯಾದವ್ ಮತ್ತು ಓಂ ಪ್ರಕಾಶ್ ರಾಜ್‌ಭರ್‌ಗೆ ಸಮಾಜವಾದಿ ಪಕ್ಷ ಪತ್ರ ಬರೆದಿದ್ದು, ಮೈತ್ರಿ ಬಿಟ್ಟು ಬೇರೆ ಪಕ್ಷ ಸೇರಲು ನೀವು ಸ್ವತಂತ್ರರು ಎಂದಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಮತ್ತು ಮಿತ್ರ ಪಕ್ಷದ ನಾಯಕ ಓಂ ಪ್ರಕಾಶ್ ರಾಜ್‌ಭರ್ ಅವರಿಗೆ ಪತ್ರ ಬರೆದಿದ್ದು, 'ಇತರ ಪಕ್ಷಗಳಲ್ಲಿ ಅವರಿಗೆ ಹೆಚ್ಚಿನ ಗೌರವ ಸಿಗುತ್ತದೆ ಎಂದು ಭಾವಿಸಿದರೆ, ಅವರು ಇತರ ಪಕ್ಷಗಳಿಗೆ ಸೇರಲು ಸ್ವತಂತ್ರರು' ಎಂದು ಹೇಳಿದೆ.
ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ನಾಯಕ ರಾಜ್‌ಭರ್‌ಗೆ ಬರೆದ ಪತ್ರದಲ್ಲಿ, ಅವರು ಭಾರತೀಯ ಜನತಾ ಪಾರ್ಟಿಯೊಂದಿಗೆ ಗಟ್ಟಿಯಾದ ಸಂಬಂಧವನ್ನು ಹೊಂದಿದ್ದು, ಪಕ್ಷ ಬಲಪಡಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದೆ.

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಆರು ಶಾಸಕರನ್ನು ಹೊಂದಿರುವ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಮುಖ್ಯಸ್ಥರಾಗಿರುವ ಓಂ ಪ್ರಕಾಶ್ ರಾಜ್‌ಭರ್ ಅವರು ಇತ್ತೀಚೆಗೆ ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿದ್ದರು. ಶಿವಪಾಲ್ ಸಿಂಗ್ ಯಾದವ್ ಕೂಡ ಬಿಜೆಪಿ ನೇತೃತ್ವದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದ್ರೌಪದಿ ಮುರ್ಮು ಅವರಿಗಾಗಿ ಆಯೋಜಿಸಿದ್ದ ಔತಣಕೂಟದಲ್ಲಿ ಇಬ್ಬರೂ ನಾಯಕರು ಭಾಗವಹಿಸಿದ್ದರು.
ಪಕ್ಷದ ಸಭೆಗಳಿಗೆ ಅಖಿಲೇಶ್ ಯಾದವ್ ಅವರು ತನ್ನನ್ನು ಆಹ್ವಾನಿಸುತ್ತಿಲ್ಲ. ಅವರ "ಅಪ್ರಬುದ್ಧತೆ" ಯಿಂದ ಪಕ್ಷದ ಹಲವಾರು ಮೈತ್ರಿ ಪಕ್ಷಗಳು ಈಗ ಪ್ರತ್ಯೇಕ ಮಾರ್ಗವನ್ನು ತೆಗೆದುಕೊಳ್ಳುತ್ತಿವೆ ಎಂದು ಶಿವಪಾಲ್ ಯಾದವ್ ಆರೋಪಿಸಿದ್ದಾರೆ.

ಪ್ರಗತಿಶೀಲ ಸಮಾಜವಾದಿ ಪಕ್ಷ-ಲೋಹಿಯಾ ಮುಖ್ಯಸ್ಥರಾಗಿರುವ ಶಿವಪಾಲ್ ಯಾದವ್ ಜಸ್ವಂತ್ ನಗರದ ಶಾಸಕರಾಗಿದ್ದಾರೆ. ಆದರೆ ಅವರು ಸಮಾಜವಾದಿ ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಯುಪಿಯಲ್ಲಿ ಅಖಿಲೇಶ್ ಯಾದವ್ ಅವರ 2012-2017 ಸರ್ಕಾರದಲ್ಲಿ ಅವರು ಎರಡನೇ ಪ್ರಮುಖ ಸಚಿವರಾಗಿದ್ದರು. ಅವರು 2018 ರಲ್ಲಿ ಸಮಾಜವಾದಿ ಪಕ್ಷ ಅಧಿಕಾರ ಕಳೆದುಕೊಂಡಾಗ ಹೊಸ ಪಕ್ಷ ರಚಿಸಿದ್ದಾರೆ. ಆದರೆ, 2022 ರ ವಿಧಾನಸಭಾ ಚುನಾವಣೆಗೂ ಮುನ್ನ ಮತ್ತೆ ಅಖಿಲೇಶ್ ಯಾದವ್ ಜೊತೆಯಾದರು.
ಇನ್ನು, ಓಂ ಪ್ರಕಾಶ್ ರಾಜ್‌ಭರ್ ಅವರು ಅಖಿಲೇಶ್ ಯಾದವ್ ವಿರುದ್ಧ ಸಾರ್ವಜನಿಕವಾಗಿ ಹಲವು ಬಾರಿ ವಾಗ್ದಾಳಿ ನಡೆಸಿದ್ದಾರೆ. ಮೇ ತಿಂಗಳಲ್ಲಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಏರ್ ಕಂಡಿಷನರ್‌ಗಳಿಗೆ ಒಗ್ಗಿಕೊಂಡಿದ್ದಾರೆ ಎಂದು ಟೀಕಿಸಿದ್ದರು.












Click it and Unblock the Notifications