ಕಂಗೆಟ್ಟಿರುವ ಕಾಂಗ್ರೆಸ್‌ನ ಕುಟುಂಬಕ್ಕೆ ನಿದ್ದೆಯೇ ಇಲ್ಲ: ಬಿಜೆಪಿ ಲೇವಡಿ
ನವದೆಹಲಿ, ಡಿಸೆಂಬರ್ 6: ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಪ್ರಮುಖ ಮಧ್ಯವರ್ತಿ ಕ್ರಿಸ್ಟಿಯನ್ ಮೈಕಲ್‌ನ ಗಡಿಪಾರಿನ ಬಳಿಕ ಕಾಂಗ್ರೆಸ್ ತಡಬಡಾಯಿಸುತ್ತಿದ್ದು, ಪಕ್ಷದಲ್ಲಿನ ಕುಟುಂಬಕ್ಕೆ ರಾತ್ರಿಯಿಡೀ ನಿದ್ದೆಯೇ ಬರುತ್ತಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ.
ಕ್ರಿಸ್ಟಿಯನ್ ಮೈಕಲ್‌ನ ಗಡಿಪಾರಿನ ನಂತರ ಕಾಂಗ್ರೆಸ್ ಕಂಗೆಟ್ಟಿದೆ. ಮೈಕಲ್‌ನನ್ನು ಬಚಾವು ಮಾಡಲು ಅವರು ತಂಡವೊಂದನ್ನು ಕಳುಹಿಸಿದ್ದರು. ಕಾಂಗ್ರೆಸ್‌ನ ಅಲ್ಜೊ ಜೋಸೆಫ್ ಆತನ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕೊನೆಗೆ ಅವರನ್ನು ಪಕ್ಷದಿಂದ ಕಿತ್ತುಹಾಕುವ ಸಂಕಟಕ್ಕೆ ಸಿಲುಕಿಕೊಂಡಿತು. ಕಾಂಗ್ರೆಸ್‌ನ ಕುಟುಂಬ ರಾತ್ರಿ ನಿದ್ರಾಹೀನತೆಯಿಂದ ಬಳಲುತ್ತಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ವ್ಯಂಗ್ಯವಾಡಿದ್ದಾರೆ.
ಮೈಕಲ್‌ನ ಪರವಾಗಿ ಕೆಲಸ ಮಾಡುತ್ತಿರುವ ಅಲ್ಜೊ ಜೋಸೆಫ್ ಅಲ್ಲದೆ ಇನ್ನಿಬ್ಬರು ವಕೀಲರು ಕೂಡ ಕಾಂಗ್ರೆಸ್‌ನವರೇ ಆಗಿದ್ದಾರೆ. ವಿಷ್ಣು ಶಂಕರ್ ಕೇರಳ ಕಾಂಗ್ರೆಸ್ ಮುಖಂಡರ ಮಗನಾಗಿದ್ದರೆ, ಶ್ರೀರಾಮ್ ಪರಕ್ಕಾಟ್, ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಸದಸ್ಯನಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಮೂವರೂ ಕಾಂಗ್ರೆಸ್‌ನ ಮಹಾನ್ ವಕೀಲರಾದ ಸಲ್ಮಾನ್ ಖುರ್ಷಿದ್ ಮತ್ತು ಕಪಿಲ್ ಸಿಬಲ್ ಅವರ ಅಡಿಯಲ್ಲಿ ಕೆಲಸ ಮಾಡಿದ್ದವರು ಎಂದು ತಿಳಿಸಿದ್ದಾರೆ.












Click it and Unblock the Notifications