ರಾಹುಲ್ ಗಾಂಧಿ ವಿರುದ್ಧ ಆಮ್ ಆದ್ಮಿ ಅಭ್ಯರ್ಥಿ ಕಣಕ್ಕೆ?
ನವದೆಹಲಿ, ಡಿ. 12 : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಿದ ಆಮ್ ಆದ್ಮಿ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಎಲ್ಲವೂ ಅಂದು ಕೊಂಡಂತೆ ನಡೆದರೆ, ಹಿಂದಿ ಕವಿ ಡಾ.ಕುಮಾರ್ ವಿಶ್ವಾಸ್ ರಾಹುಲ್ ಗಾಂಧಿಗೆ ಪೈಪೋಟಿ ನೀಡಲಿದ್ದಾರೆ.
ಆಮ್ ಆದ್ಮಿ ಮುಖಂಡ ಮನೀಶ್ ಸಿಸೋಡಿಯಾ ಈ ಕುರಿತು ಮಾಹಿತಿ ನೀಡಿದ್ದು, 2014ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ರಾಹುಲ್ ಗಾಂಧಿ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಅದರಲ್ಲಿಯೂ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಆಪ್ತರಾಗಿರುವ ಡಾ. ಕುಮಾರ್ ವಿಶ್ವಾಸ್ ಅವರನ್ನು ಕಣಕ್ಕೆ ಇಳಿಸಲಾಗುವುದು ಎಂದು ಹೇಳಿದ್ದಾರೆ.

ನಮ್ಮ ಯುವ ಹೃದಯ ಸಾಮ್ರಾಟರನ್ನು ಯುವರಾಜಕ ವಿರುದ್ಧ ಕಣಕ್ಕೆ ಇಳಿಸಲು ಬಯಸಿದ್ದೇವೆ. ಎಲ್ಲವೂ ಅಂದು ಕೊಂಡಂತೆ ನಡೆದರೆ, ಉತ್ತರಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕುಮಾರ್ ವಿಶ್ವಾಸ್ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ. ವಿಶ್ವಾಸ್ ಉತ್ತರಪ್ರದೇಶ ಮೂಲದವರಾದ್ದರಿಂದ ಸ್ಥಳಿಯ ವ್ಯಕ್ತಿಯನ್ನು ಕಣಕ್ಕೆ ಇಳಿಸಲು ಆಮ್ ಆದ್ಮಿ ಪಕ್ಷ ನಿರ್ಧರಿಸಿದೆ.
ಮಾರ್ಚ್- ಏಪ್ರಿಲ್ ನಲ್ಲಿ ಚುನಾವಣೆ : ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲುಕಂಡ ಕಾಂಗ್ರೆಸ್ ಪಕ್ಷ ಅವಧಿಗೂ ಮುನ್ನವೇ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜ.13 ರಿಂದ 17ರೊಳಗೆ ಲೇಖಾನುದಾನ ಮಂಡಿಸಿ, ಲೋಕಸಭೆ ವಿಸರ್ಜಿಸುವ ಸಾಧ್ಯತೆಯಿದೆ ಎಂದು ಸುದ್ದಿ ಹರಿದಾಡುತ್ತಿದೆ. (ಯುಪಿಎ ಹೀಂಗೆ ಆಡ್ತಾ ಇದ್ರೆ ಸೋಲು ಗ್ಯಾರಂಟಿ)
ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲಿ ಲೋಕಸಭೆ ಚುನಾವಣೆ ಎದುರಿಸಲು ಪಕ್ಷ ಚಿಂತನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಸಾಲು-ಸಾಲು ಹಗರಣ, ಸಂಸತ್ತು ನಿಷ್ಕ್ರಿಯವಾಗಿರುವುದು ಮುಂತಾದವುಗಳಿಂದ ಜನರ ವಿರೋಧಿಯಾಗಿರುವ ಕಾಂಗ್ರೆಸ್, ಅವಧಿಗೂ ಮುನ್ನವೇ ಜನರ ಬಳಿ ಹೋಗಿ ಮತಯಾಚನೆ ಮಾಡಲು ನಿರ್ಧರಿಸಿದೆ. ಆದರೆ, ಕೆಲವು ಕೇಂದ್ರ ಸಚಿವರು ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.












Click it and Unblock the Notifications