ಎಲ್ಲ ಹೊಸ ಪಕ್ಷಗಳಿಗಿಂತ ಆಪ್ ವಿಭಿನ್ನವಾಗಿದೆ, ಆದರೆ...
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಿರುವ ಭಾರತದಲ್ಲಿ, ಸ್ವಾತಂತ್ರ್ಯೋತ್ತರದಲ್ಲಿ ಹಲವಾರು ರಾಜಕೀಯ ಪಕ್ಷಗಳು ಟಿಸಿಲೊಡೆದಿವೆ. ಕೆಲವು ಎಲ್ಲ ಪ್ರತಿರೋಧ, ವೈರುಧ್ಯಗಳನ್ನು ಮೀರಿ ಗಟ್ಟಿಯಾಗಿ ನೆಲೆಯೂರಿ ನಿಂತಿವೆ. ಹಲವಾರು ಪಕ್ಷಗಳು ಹೇಳಹೆಸರಿಲ್ಲದಂತೆ ನಿರ್ನಾಮವಾಗಿ ಹೋಗಿವೆ.
ಆದರೆ, ಎಲ್ಲ ಪಕ್ಷಗಳಲ್ಲಿ ಹೆಚ್ಚೂಕಡಿಮೆ ಒಂದೇ ಉದ್ದೇಶ. ಅಧಿಕಾರ ಗಳಿಸಬೇಕು, ರಾಜ್ಯ(ದೇಶ)ದ ಜನರ 'ಸೇವೆ' ಮಾಡಬೇಕು. ಯಾವ ಪಕ್ಷವೂ ಆಗಲಿ ಭ್ರಷ್ಟಾಚಾರದ ವಿರುದ್ಧ ಟೊಂಕಕಟ್ಟಿ ನಿಲ್ಲುತ್ತೇನೆ, ಆಡಳಿತದಲ್ಲಿನ ಅವ್ಯವಸ್ಥೆಯನ್ನು ಅಮೂಲಾಗ್ರವಾಗಿ ಸರಿಪಡಿಸುತ್ತೇನೆ, ಪಾರದರ್ಶಕ ಆಡಳಿತ ನೀಡುತ್ತೇನೆ ಎಂಬ ಧ್ಯೇಯದಿಂದ ರಾಜಕೀಯ ಕಣಕ್ಕೆ ಇಳಿದಿಲ್ಲ. ಇಳಿದಿದ್ದರೂ ಯಶಸ್ವಿಯಾಗಿಲ್ಲ.
ಪರಿಸ್ಥಿತಿ ಹೀಗಿರುವಾಗ, ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೊಗೆಯುತ್ತೇನೆ ಎಂಬ ಒಂದೇ ಉದ್ದೇಶದಿಂದ ಸಂಘಟಿತವಾಗಿ ಹೋರಾಟ ನಡೆಸಿ, ನಂತರ ರಾಜಕೀಯ ಪಕ್ಷ ಕಟ್ಟಿದ ಆಮ್ ಆದ್ಮಿ ಪಕ್ಷ, ಜನಸಾಮಾನ್ಯರಿಗೆ ಕತ್ತಲ ಕೋಣೆಯಲ್ಲಿ ಇಣುಕಿದ ಆಶಾಕಿರಣವಾಗಿ ಕಂಡಿತ್ತು. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಆಮ್ ಆದ್ಮಿ ಪಕ್ಷ ಮಿಂಚುಹುಳುವಿನಂತೆ ಕಂಡಿದೆಯಾ ಎಂಬ ಅನುಮಾನವೂ ಮೂಡುತ್ತಿದೆ. [ದೆಹಲಿಯಲ್ಲಿ ಆಪ್ ಧೂಳಿಪಟ : ಗುಪ್ತಚರ ಇಲಾಖೆ ಸ್ಫೋಟಕ ವರದಿ]
ಭಾರತದಲ್ಲಿ ಹುಟ್ಟುಕಂಡಿರುವ ಹೊಸಪಕ್ಷಗಳು, ಅವರು ಮಾಡಿರುವ ಸಾಧನೆಗಳು, ಬುಟ್ಟಿಗೆ ಹಾಕಿಕೊಂಡಿರುವ ಮತಗಳ ದತ್ತಾಂಶಗಳನ್ನು ಗುಡ್ಡೆಹಾಕಿಕೊಂಡು ಇಂಡಿಯಾಸ್ಪೆಂಡ್ ಸಂಸ್ಥೆ ವಿಶ್ಲೇಷಣೆ ನಡೆಸಿದ್ದು, ಆಮ್ ಆದ್ಮಿ ಪಕ್ಷ ಆಶಾಕಿರಣವಾಗಿ ಕಂಡಿದ್ದರೂ, ಅದರ ಹೋರಾಟದಿಂದ ಆಗಿರುವ ರಾಜಕೀಯ ಪರಿಣಾಮಗಳು ಅಷ್ಟೊಂದು ಪ್ರಭಾವ ಬೀರಿಲ್ಲ.
ಆಮ್ ಆದ್ಮಿ ಪಕ್ಷದ ರಾಜಕೀಯ ಅಭಿಯಾನ ನಿಜಕ್ಕೂ ಶ್ಲಾಘನೀಯ. ರಾಜಕೀಯ ಪಕ್ಷ ನಿರ್ಮಿಸುವಾಗ ಅನೇಕರಿಂದ ಪ್ರತಿರೋಧ ಕಂಡುಬಂದಿದ್ದರೂ, ಇಟ್ಟ ದಿಟ್ಟ ಹೆಜ್ಜೆಯಿಂದ ಹಿಂದೆ ಸರಿಯದೆ ಅರವಿಂದ್ ಕೇಜ್ರಿವಾಲ್ ಪಕ್ಷ ಕಟ್ಟಿದ್ದಲ್ಲದೆ, ಮೊಟ್ಟಮೊದಲ ಬಾರಿ ಎದುರಿಸಿದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಗಳನ್ನು ಬುಡಮೇಲು ಮಾಡಿ ದೆಹಲಿಯ ಆಡಳಿತ ಚುಕ್ಕಾಣಿಯನ್ನೂ ಹಿಡಿದರು. 70 ಸ್ಥಾನಗಳಲ್ಲಿ 28ನ್ನು ಗೆದ್ದು ರಾಜ್ಯಭಾರ ಮಾಡಿತು. ಇದು ಕಡಿಮೆ ಸಾಧನೆಯೇನಲ್ಲ.
ಭಾರತದಲ್ಲಿ ಕಣ್ಣುಬಿಟ್ಟಿರುವ ಹಲವಾರು ಪಕ್ಷಗಳೆಲ್ಲವೂ ಸ್ಥಳೀಯ ಅಥವಾ ಪ್ರಾದೇಶಿಕ ಮಟ್ಟದಲ್ಲಿ ರಾಜಕೀಯ ನಡೆಸಿವೆ. ಈ ವಿಷಯದಲ್ಲಿ ಆಮ್ ಆದ್ಮಿ ಪಕ್ಷ ಇವೆಲ್ಲವುಗಳಿಗಿಂತ ವಿಭಿನ್ನವಾಗಿ ನಿಂತಿದೆ. ಅದರ ಬಿಳಲುಗಳು ದೇಶದೆಲ್ಲೆಡೆ ಪಸರಿಸಿಕೊಂಡಿವೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದರೂ ಧೈರ್ಯವಾಗಿ ಮುನ್ನುಗ್ಗುತ್ತಿದೆ.
ಹೊಸದಾಗಿ ಸ್ಥಾಪನೆಯಾದ ಇತರ ಪಕ್ಷಗಳಿಗೆ ಹೋಲಿಸಿದರೆ ಆಮ್ ಆದ್ಮಿ ಪಕ್ಷದ ಸಾಧನೆ ಹೇಗಿದೆ ಎಂಬುದನ್ನು ಇಂಡಿಯಾಸ್ಪೆಂಡ್ ಹೇಗೆ ವಿಶ್ಲೇಷಣೆ ಮಾಡಿದೆ ಎಂಬುದನ್ನು ಮುಂದೆ ಓದಿರಿ. [ದೆಹಲಿ ಸಿಎಂ ಹುದ್ದೆಗೆ ಯಾರು ಬೆಸ್ಟ್?]

ಎನ್ಟಿ ರಾಮರಾವ್ ಸಂಚಲನ, ಟಿಡಿಪಿ ಜಯಭೇರಿ
ಆಂಧ್ರಪ್ರದೇಶದಲ್ಲಿ ಖ್ಯಾನ ನಟ ಎನ್‌ಟಿ ರಾಮರಾವ್ ಅವರು ತೆಲಗು ದೇಶಂ ಪಕ್ಷ ಕಟ್ಟಿದಾಗ ಭಾರೀ ಸಂಚಲನ ಎಬ್ಬಿಸಿದ್ದರು. ಹೊಸ ರಾಜಕೀಯ ಚಳವಳಿಗೆ ನಾಂದಿ ಹಾಡಿದ್ದರು. ಅವರ ಪಕ್ಷ 1983ರಲ್ಲಿ ಶೇ.69ರಷ್ಟು ಸೀಟುಗಳನ್ನು ಗಳಿಸಿ ಜಯಭೇರಿ ಬಾರಿಸಿತ್ತು. ಒಟ್ಟು ಮತಗಳಲ್ಲಿ ಶೇ.54ರಷ್ಟು ತನ್ನ ಬಗಲಿಗೆ ಇಳಿಸಿಕೊಂಡಿತ್ತು.

ಯಶಸ್ಸಿನ ಬೆನ್ನೇರಿ ಬಿಜು ಜನತಾ ದಳ
ಇನ್ನು ಒರಿಸ್ಸಾದಲ್ಲಿ ಬಿಜು ಪಟ್ನಾಯಕ್ ಸ್ಥಾಪಿಸಿದ ಬಿಜು ಜನತಾ ದಳ ಪಕ್ಷ ಮೊದಲ ಪ್ರಯತ್ನದಲ್ಲಿ 2000ರಲ್ಲಿ ನಡೆದ ಚುನಾವಣೆಯಲ್ಲಿ ಶೇ.46ರಷ್ಟು ಸ್ಥಾನಗಳನ್ನು ಪಡೆದಿತ್ತು ಮತ್ತು ಶೇ.29ರಷ್ಟು ಮತಗಳನ್ನು ಗಳಿಸಲು ಯಶಸ್ವಿಯಾಗಿತ್ತು. ಈಗ ಪಕ್ಷದ ನೇತೃತ್ವವನ್ನು ನವೀನ್ ಪಟ್ನಾಯಕ್ ವಹಿಸಿದ್ದಾರೆ.

ನಿರೀಕ್ಷೆಗಳನ್ನು ಬುಡಮೇಲೆ ಮಾಡಿದ್ದ ಆಪ್
2013ರಲ್ಲಿ ದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಆಮ್ ಆದ್ಮಿ ಪಕ್ಷ ಶೇ.40ರಷ್ಟು ಸೀಟುಗಳನ್ನು ಗಳಿಸಿ ಬಿಜೆಪಿ ನಂತರ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಶೇ.30ರಷ್ಟು ಮತಗಳನ್ನು ಗಳಿಸಿತ್ತು. ಕಾಂಗ್ರೆಸ್ ಮಕಾಡೆಮಲಗಿತ್ತು. ಆದರೂ, ಕಾಂಗ್ರೆಸ್ ಸಹಕಾರದಿಂದ ಸರಕಾರ ರಚಿಸಿತ್ತು.

ಸೋನಿಯಾ ಧಿಕ್ಕರಿಸಿ ಸ್ಥಾಪಿಸಿದ್ದ ಎನ್ಸಿಪಿ
1999ರಲ್ಲಿ ಸೋನಿಯಾ ಗಾಂಧಿ ಅವರ ನಾಯಕತ್ವವನ್ನು ಧಿಕ್ಕರಿಸಿ, ಶರದ್ ಪವಾರ್, ಪಿಎ ಸಂಗ್ಮಾ ಮತ್ತು ತಾರಿಕ್ ಅನ್ವರ್ ಸ್ಥಾಪಿಸಿದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಶೇ.20ರಷ್ಟು ಮಾತ್ರ ಸೀಟು ಗಳಿಸಲು ಯಶಸ್ವಿಯಾಗಿತ್ತು. ಈಗ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ.

ತನ್ನ ಶಕ್ತಿ ಏನೆಂದು ತೋರಿಸುವುದೆ ಆಪ್?
ಟಿಡಿಪಿ, ಬಿಜೆಡಿ, ಎನ್‌ಸಿಪಿ, ಆರ್‌ಜೆಡಿ, ಎಸ್‌ಪಿ, ಪಿಡಿಪಿ, ಬಿಎಸ್‌ಪಿ, ಎಐಎಡಿಎಂಕೆ, ಜೆಡಿಎಸ್, ಶಿವಸೇನಾ ಪಕ್ಷಗಳಿಗೆ ಹೋಲಿಸಿದರೆ ಆಮ್ ಆದ್ಮಿ ಪಕ್ಷದ ಗುರಿ ನಿಖರವಾಗಿದೆ, ಪ್ರಯತ್ನ ನಿರಂತರವಾಗಿದೆ. ಆದರೆ, ರಾಜಕೀಯ ಮುತ್ಸದ್ದಿತನದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಹಲವಾರು ಬಾರಿ ಎಡವಿಬಿದ್ದಿದೆ. ಇದನ್ನು ದೆಹಲಿ ಮತದಾರರು ಹೇಗೆ ಮತ್ತೆ ಸ್ವೀಕರಿಸುತ್ತಾರೆ, ಮತ್ತೊಂದು ಚಾನ್ಸ್ ಕೊಡುತ್ತಾರಾ? ಫೆಬ್ರವರಿ 7ರಂದು ಚುನಾವಣೆಯಲ್ಲಿ ತಿಳಿದುಬರಲಿದೆ.












Click it and Unblock the Notifications