ಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆ ವಿಳಂಬವಿಲ್ಲ: ಅಶ್ವಿನಿ ವೈಷ್ಣವ್
ನವದೆಹಲಿ, ಫೆಬ್ರವರಿ 11: ಬೆಂಗಳೂರು ಉಪನಗರ ಯೋಜನೆಯಲ್ಲಿ ಯಾವುದೇ ವಿಳಂಬವಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಎಸ್‌ಆರ್‌ಪಿಯ ಅನುಷ್ಠಾನ ಸಂಸ್ಥೆಯಾದ ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಇದನ್ನು ಆರು ವರ್ಷಗಳ ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಲು ಬದ್ಧವಾಗಿದೆ ಎಂದರು.
ಬಿಎಸ್‌ಆರ್‌ಪಿ ಕಾರ್ಯಗತಗೊಳಿಸಲು ಅಗತ್ಯವಿರುವ ಸುಮಾರು ಶೇ.85ರಷ್ಟು ಭೂಮಿ ಈಗಾಗಲೇ ಲಭ್ಯವಿದೆ. ಉಳಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರೆದಿದೆ ಎಂದು ತಿಳಿಸಿದರು.

ಟೆಂಡರ್ ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ, ಜನವರಿ 31ರವರೆಗೆ ಅಂದಾಜು 103.8 ಕೋಟಿ ರೂ. ಕೆ-ರೈಡ್ ತಾಂತ್ರಿಕ ದಾಖಲೆಗಳ ಅನುಮೋದನೆ ದೊರೆತಿದೆ.
ಇದಲ್ಲದೆ ನಗರ ಹಾಗೂ ಭೂ ಸಾರಿಗೆ ಇಲಾಖೆ ಆಯುಕ್ತರು ಕೆರೈಡ್‌ನೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸುತ್ತಾ ಇದ್ದಾರೆ. ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ರಚಿಸಲಾದ ಬೆಂಗಳೂರು ಮಿಷನ್ 2022 ವೇದಿಕೆಯಲ್ಲಿ ಪ್ರಗತಿ ಮೇಲ್ವಿಚಾರಣೆ ನಡೆಯುತ್ತಿದೆ.
ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ರೈಲು ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ - ಚಿಕ್ಕಬಾಣಾವರ ಕಾರಿಡಾರ್ ನಿರ್ಮಾಣ ಕುರಿತು 2021ರ ನವೆಂಬರ್‌ನಲ್ಲಿ ಟೆಂಡರ್ ಕರೆದಿತ್ತು.
ಈ ಮಾರ್ಗ 25.1 ಕಿ.ಮೀ ಉದ್ದವಿದ್ದು, 2026ಕ್ಕೆ ಕಾಮಗಾರಿ ಮುಗಿಸಲು ಗಡುವು ನೀಡಲಾಗಿದೆ. 2030ರಿಂದ ಸಬ್ ಅರ್ಬನ್ ರೈಲು ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ.
ಕೇಂದ್ರ ಸಚಿವ ಸಂಪುಟ ಆರ್ಥಿಕ ವ್ಯವಹಾರಗಳ ಸಮಿತಿ ಉಪನಗರ ರೈಲು ಯೋಜನೆಗೆ ಅನುಮೋದನೆ ನೀಡುವಾಗ ನಾಲ್ಕು ಕಾರಿಡಾರ್ ಪೈಕಿ ಆದ್ಯತೆ ಮೇರೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ - ದೇವನಹಳ್ಳಿ ಕಾರಿಡಾರ್ ಕೈಗೆತ್ತಿಕೊಂಡು ಮೂರು ವರ್ಷದಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತ್ತು.
ಆದರೆ, ರಾಜ್ಯ ಸರಕಾರದ ಸೂಚನೆ ಮೇರೆಗೆ ಕೆ - ರೈಡ್, ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ - ಚಿಕ್ಕಬಾಣಾವರ ಮತ್ತು ಹೀಲಲಿಗೆ - ರಾಜಾನುಕುಂಟೆ ಕಾರಿಡಾರ್ ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ. 148.17 ಕಿ.ಮೀ ಉದ್ದದ 15,767 ಕೋಟಿ ರೂ. ಅಂದಾಜು ವೆಚ್ಚದ ಉಪನಗರ ರೈಲು ಯೋಜನೆಯಲ್ಲಿ ಪ್ರಮುಖವಾಗಿ ನಾಲ್ಕು ಕಾರಿಡಾರ್‌ಗಳು ಬರಲಿವೆ. ಈ ಪೈಕಿ ಕೆ - ರೈಡ್ ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ -ಚಿಕ್ಕಬಾಣಾವರ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವ ನಿರ್ಧಾರ ಮಾಡಿದೆ.
ಸಬ್‌ಅರ್ಬನ್ ರೈಲು ಯೋಜನೆಗೆ ಕೇಂದ್ರ ಸಿದ್ಧ
ಬೈಯಪ್ಪನಹಳ್ಳಿ - ಚಿಕ್ಕಬಾಣಾವರ ಕಾರಿಡಾರ್‌ನಲ್ಲಿ ಒಟ್ಟು 14 ರೈಲು ನಿಲ್ದಾಣಗಳು ಬರಲಿವೆ. ಬೈಯಪ್ಪನಹಳ್ಳಿ, ಕಸ್ತೂರಿನಗರ, ಸೇವಾನಗರ, ಬಾಣಸವಾಡಿ, ಕಾವೇರಿನಗರ, ನಾಗವಾರ, ಕನಕನಗರ, ಹೆಬ್ಬಾಳ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ, ಜಾಲಹಳ್ಳಿ, ಶೆಟ್ಟಿಹಳ್ಳಿ, ಮೈದಾರಹಳ್ಳಿ ಹಾಗೂ ಚಿಕ್ಕಬಾಣಾವರ ರೈಲ್ವೆ ನಿಲ್ದಾಣಗಳು ಬರಲಿವೆ.












Click it and Unblock the Notifications