ದೆಹಲಿಯಲ್ಲಿ ಒಂದೇ ಕುಟುಂಬದ ಮೂವರ ಸಾವು: ಕೊಲೆಯ ಶಂಕೆ
ನವದೆಹಲಿ, ಅಕ್ಟೋಬರ್ 10: ದಕ್ಷಿಣ ದೆಹಲಿಯ ವಸಂತ್ ಕುಂಜ್ ನಲ್ಲಿ ಒಂದೇ ಕುಟುಂಬದ ಮೂವರ ಶವ ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ.
ಮೂವರ ಮೃತದೇಹದ ಮೇಲೂ ಇರಿದ ಗುರುತುಗಳಿದ್ದು, ಇದು ಕೊಲೆ ಎಂದು ಶಂಕಿಸಲಾಗಿದೆ. ಮಿತಿಲೇಶ್ ಮತ್ತು ಸಿಯಾ ಎಂಬ 40 ವರ್ಷದ ಆಸು ಪಾಸಿನ ದಂಪತಿ ಮತ್ತು ಅವರ 16 ವರ್ಷ ವಯಸ್ಸಿನ ಪುತ್ರಿ ನೇಹಾ ಮೃತರಾಗಿದ್ದು, ಇವರ ಪುತ್ರ 19 ವರ್ಷ ವಯಸ್ಸಿನ ಯುವಕನ ದೇಹದ ಮೇಲೂ ಗಾಯದ ಕಲೆಗಳಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಸಂತ ಕುಂಜ್ ನ ಕಿಶನ್ಘರ್ ಎಂಬ ಕಟ್ಟಡದಲ್ಲಿ ಬೆಳಿಗಗೆ ಸುಮಾರು 5 ಗಂಟೆಯ ಸಮಯಕ್ಕೆ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಮನೆ ಕೆಲಸದಾಕೆ ಬೆಳಿಗ್ಗೆ ಕೆಲಸಕ್ಕೆಂದು ಮನೆಗೆ ಬಂದಾಗ ಬಾಗಿಲು ತೆರೆದೇ ಇತ್ತು. ಒಳಗೆ ತೆರಳಿದಾಗ ಮೂವರ ಶವ ಕಂಡಿದ್ದು, ಗಾಬರಿಗೊಂಡ ಆಕೆ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಪೊಲೀಸರು ಆಗಮಿಸಿ, ಪ್ರಾಥಮಿಕ ತನಿಖೆ ನಡೆಸಿ, ಪುತ್ರನ ವಿಚಾರಣೆ ನಡೆಸಿದ್ದಾರೆ.

'ಕಳೆದ ಆರು ತಿಂಗಳ ಹಿಂದೆ ಮಿತಿಲೇಶ್ ಅವರ ಪುತ್ರನನ್ನು ಕೆಲವರು ಅಪಹರಿಸಿದ್ದರು' ಎಂಬ ವಿಷಯವನ್ನು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ದಾಖಲಿಕೊಂಡಿರುವ ಪೊಲೀಸರು ಹತ್ತಿರದ ಸಿಸಿಟಿವಿ ಫೂಟೇಜ್ ಅನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.












Click it and Unblock the Notifications