ನವದೆಹಲಿ: ಸ್ವಗೋತ್ರದಲ್ಲಿ ಮದುವೆಯಾದವನಿಗೆ ಗುಂಡೇಟು
ನವದೆಹಲಿ, ಮೇ 16: ಒಂದೇ ಗೋತ್ರದ ಹುಡುಗಿಯನ್ನು ಮದುವೆಯಾದ ಏಕೈಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಆತನ ಸಂಬಂಧಿಕರು ಗುಂಡು ಹಾರಿಸಿರುವ ಘಟನೆ ನಡೆದಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
25 ವರ್ಷ ವಯಸ್ಸಿನ ಯುವಕನ ಮೇಲೆ ಬುಧವಾರ ತಡರಾತ್ರಿ ಗುಂಡು ಹಾರಿಸಲಾಗಿದೆ. ಅದೃಷ್ಟವಶಾತ್ ಗುಂಡು ಭುಜವನ್ನು ಸವರಿಸಿಕೊಂಡು ಹೋಗಿದೆ. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಯುವಕನಿಗೆ ಸದ್ಯ ದೀನ್ ದಯಾಳ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯುವಕನ ಆರೋಗ್ಯ ಸ್ಥಿತಿ ಸುಧಾರಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಏನಿದು ಘಟನೆ?: 25 ವರ್ಷ ವಯಸ್ಸಿನ ಯುವಕ ಬಾಬ್ಬಿ ಹಾಗೂ ಆತನ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ನಡುವೆ ಪ್ರೀತಿ ಉಂಟಾಗಿದೆ. ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಕರೆದುಕೊಂಡು ಮನೆಯವರಿಗೆ ತಿಳಿಸದೆ ಮದುವೆಯಾಗಿದ್ದರು. ಕಳೆದ ನವೆಂಬರ್ ನಲ್ಲಿ ಮದುವೆಯಾಗಿ ಪಶ್ಚಿಮ ದೆಹಲಿಯಲ್ಲಿ ವಾಸವಾಗಿದ್ದರು.

ಬುಧವಾರದಂದು ಉತ್ತಮ್ ನಗರ ಪ್ರದೇಶದಲ್ಲಿ ಬಾಬ್ಬಿಯನ್ನು ಆತನ ಪತ್ನಿಯ ಅಣ್ಣಂದಿರಾದ ನಿತಿನ್ (26) ಹಾಗೂ ನೀರಜ್(30) ತಡೆದಿದ್ದಾರೆ. ಸ್ವಗೋತ್ರದಲ್ಲಿ ಮದುವೆಯಾಗಿದ್ದಕ್ಕೆ ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಈ ಸಂದರ್ಭದಲ್ಲಿ ಕೋಪಗೊಂಡ ನಿತಿನ್ ಹಾಗೂ ನೀರಜ್ ಅವರು ಬಾಬ್ಬಿ ಮೇಲೆ ಗುಂಡು ಹಾರಿಸಿದ್ದಾರೆ. ತಪ್ಪಿಸಿಕೊಂಡು ಓಡಿದ ಬಾಬ್ಬಿಯ ಭುಜಕ್ಕೆ ಗಾಯವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಬಾಬ್ಬಿ ಹೇಳಿಕೆ ಪಡೆದಿದ್ದು, ಆರೋಪಿಗಳು ನಾಪತ್ತೆಯಾಗಿದ್ದು, ಶೋಧಕಾರ್ಯ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ(ಪಿಟಿಐ)












Click it and Unblock the Notifications