ಆಸ್ಪತ್ರೆಯ 'ಬೆಡ್'ಗಾಗಿ ಬಡಿದಾಟ: ದಿಲ್ಲಿ ಜನರಿಗೆ ಮೊದಲ ಆದ್ಯತೆ
ನವದೆಹಲಿ, ಜೂನ್.08: ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ಬೆಡ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರದ ನಿರ್ಧಾರವನ್ನು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸಮರ್ಥಿಸಿಕೊಂಡಿದ್ದಾರೆ.
ನವದೆಹಲಿಯ ಸರ್ಕಾರಿ ಹಾಗೂ ಸರ್ಕಾರದ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಸ್ಥಳೀಯ ಪ್ರಜೆಗಳಿಗೆ ಮೊದಲ ಆದ್ಯತೆ ನೀಡಬೇಕು. 10,000 ಹಾಸಿಗೆಗಳನ್ನು ನವದೆಹಲಿಯ ಪ್ರಜೆಗಳಿಗೆ ಮೀಸಲು ಇರಿಸುವುದಕ್ಕೆ ತೀರ್ಮಾನಿಸಿರುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದರು.
ನವದೆಹಲಿ ಆಸ್ಪತ್ರೆಗಳಲ್ಲಿ ಸ್ಥಳೀಯ ರೋಗಿಗಳಿಗಷ್ಟೇ 'ಬೆಡ್' ವ್ಯವಸ್ಥೆ!
ಸೋಮವಾರ ಮಾತನಾಡಿದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರತಿನಿತ್ಯ ನವದೆಹಲಿಯಲ್ಲಿ 1,000ಕ್ಕಿಂತ ಹೆಚ್ಚು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಮುಂದಿನ 15 ದಿನಗಳಲ್ಲಿ ನವದೆಹಲಿ ಆಸ್ಪತ್ರೆಗಳಲ್ಲಿ ಕನಿಷ್ಠ 17,000 ಬೆಡ್ ಗಳ ಅನಿವಾರ್ಯತೆ ಎದುರಾಗಲಿದೆ ಎಂದು ಸತ್ಯೇಂದ್ರ ಜೈನ್ ತಿಳಿಸಿದರು.

ನವದೆಹಲಿಯಲ್ಲಿ ಸಾವಿರ ಸಾವಿರ ಜನರಿಗೆ ಕೊವಿಡ್-19
ಕಳೆದ ವಾರ ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಪ್ರತಿನಿತ್ಯ ಕನಿಷ್ಠ 1,000 ಮಂದಿಗೆ ಕೊವಿಡ್-19 ಸೋಂಕು ತಗಲಿರುವುದು ಪತ್ತೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆಯು 28,000ದ ಗಡಿ ದಾಟಿದೆ. ಮಹಾಮಾರಿಗೆ 812ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದರೆ, 28,936 ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. 10,999 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿದ್ದರೆ, 17,125 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 15 ದಿನಕ್ಕೆ ಡಬಲ್
ನವದೆಹಲಿಯಲ್ಲಿ ಪ್ರತಿನಿತ್ಯ 1,000ಕ್ಕೂ ಅಧಿಕ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಪತ್ತೆಯಾಗುತ್ತಿವೆ. ಪ್ರತಿ 15 ದಿನಕ್ಕೆ ಸೋಂಕಿತರ ಸಂಖ್ಯೆ ಡಬಲ್ ಆಗುತ್ತಿದೆ. ಈ ತಿಂಗಳಾಂತ್ಯಕ್ಕೆ ನವದೆಹಲಿಯಲ್ಲಿ ಸೋಂಕಿತರ ಸಂಖ್ಯೆ 56,000ದ ಗಡಿ ದಾಟುವ ನಿರೀಕ್ಷೆಯಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಕನಿಷ್ಠ 17,000 ಬೆಡ್ ಗಳ ವ್ಯವಸ್ಥೆಗೆ ಕ್ರಮ
ನವದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಅಗತ್ಯ ಬೆಡ್ ಗಳ ವ್ಯವಸ್ಥೆಯನ್ನು ಕಲ್ಪಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಜೂನ್ ತಿಂಗಳಾಂತ್ಯಕ್ಕೆ ಸೋಂಕಿತರ ಚಿಕಿತ್ಸೆಗಾಗಿ ಕನಿಷ್ಠ 15,000 ದಿಂದ 17,000 ಬೆಡ್ ಗಳ ಅಗತ್ಯವಿದೆ. ಈ ಹಿನ್ನೆಲೆ ಸರ್ಕಾರವು ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ. ಸದ್ಯದ ಮಟ್ಟಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ 9,000 ಬೆಡ್ ಗಳ ಸೌಲಭ್ಯವಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಸಿಎಂ ಕೇಜ್ರಿವಾಲ್ ತೀರ್ಮಾನಕ್ಕೆ ಕೇಂದ್ರ ಸಚಿವರು ಕೆಂಡ
ನವದೆಹಲಿ ಆಸ್ಪತ್ರೆಗಳಲ್ಲಿನ ಬೆಡ್ ಗಳನ್ನು ಸ್ಥಳೀಯ ಪ್ರಜೆಗಳಿಗಷ್ಟೇ ಮೀಸಲುಗೊಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೇಂದ್ರ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ಪ್ರಶ್ನಿಸಿದ್ದಾರೆ. ಮುಂಬೈನಲ್ಲಿ ಆಸ್ಪತ್ರೆಗಳಲ್ಲಿ ಮುಂಬೈ ಪ್ರಜೆಗಳ ಚಿಕಿತ್ಸೆ ಮಾತ್ರ ಮೀಸಲು ಇರಿಸುವುದು, ಕೋಲ್ಕತ್ತಾದಲ್ಲಿನ ಆಸ್ಪತ್ರೆಗಳಲ್ಲಿ ಕೋಲ್ಕತ್ತಾದ ನಿವಾಸಿಗಳಿಗೆ ಚಿಕಿತ್ಸೆ ಮಾತ್ರ ಮೀಸಲು ಇರಿಸಿದರೆ ಹೇಗೆ ಎಂದು ಕಿಡಿ ಕಾರಿದ್ದಾರೆ. ಅಲ್ಲದೇ ನವದೆಹಲಿಯಲ್ಲಿ ಚಿಕಿತ್ಸೆ ಪಡೆಯುವುದಕ್ಕಾಗಿ ಆಗಮಿಸುವ ಜನರಿಗೆ ಪಾಸ್ ಪೋರ್ಟ್ ಮತ್ತು ವೀಸಾ ತರಬೇಕಾಗುತ್ತದೆಯೋ ಏನೋ ಎಂದು ಲೇವಡಿ ಮಾಡಿದ್ದರು.