Waqf Property: ಸಚಿವರೇ ಪ್ರತಿ ಜಿಲ್ಲೆಗಳಲ್ಲಿ ನೋಟಿಸ್ ಕೊಡಿಸಿದ್ದಾರೆ: ಆರ್.ಅಶೋಕ್
ಮೈಸೂರು, ಡಿಸೆಂಬರ್ 02: ವಕ್ಫ್ ಭೂಮಿ ವಿವಾದ ಮುಂದುವರಿದಿದೆ. ವಕ್ಫ್ ಮಂಡಳಿಯು ಬಡ ಜನರ ಭೂಮಿ ಕಬಳಿಸುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಇದಕ್ಕೆ ಸರ್ಕಾರವೇ ನೇರ ಕಾರಣ. ಪ್ರತಿ ಜಿಲ್ಲೆಗೆ ಹೋಗಿ ಅಧಿಕಾರಿಗಳನ್ನು ಬೆದರಿಸಿ ನೋಟಿಸ್ ಕೊಡಿಸುತ್ತಿದ್ದಾರೆ ಎಂದು ವಿಪಕ್ಷ ಆರ್.ಅಶೋಕ್ ಅವರು ಸಚಿವರ ವಿರುದ್ಧ ಆರೋಪ ಮಾಡಿದರು.
ಸೋಮವಾರ ವಕ್ಫ್ ಮಂಡಳಿಯಿಂದ ನೋಟಿಸ್ ನೀಡಲಾದ ಸ್ಥಳಗಳಿಗೆ ಭೇಟಿ ನೀಡಿದ ಆರ್.ಅಶೋಕ ಅವರು, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ವಕ್ಫ್ ಮಂಡಳಿ ಮೈಸೂರಿನಲ್ಲಿ ಅನೇಕ ಮಂದಿಗೆ ನೋಡಿಸ್ ನೀಡಲಾಗಿದೆ.

ಭೂಮಿಯನ್ನು ಕಬಳಿಸುವುದರ ಜೊತೆಗೆ, ಈ ಜಾಗವನ್ನು ಲೀಸ್‌ಗೆ ಪಡೆಯಿರಿ ಎಂದು ವಕ್ಫ್ ಮಂಡಳಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಕೆಲವು ಕಡೆ ಬಡಜನರ ಭೂಮಿಗೆ ಬೇಲಿ ಹಾಕಿಕೊಂಡಿದ್ದಾರೆ. ಮುಸಲ್ಮಾನರೇ ಇಲ್ಲದ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಅವರು ಕಿಡಿ ಕಾರಿದರು.
ಕಾನೂನು ಸುವ್ಯವಸ್ಥೆ ಹಾಳಾಗಲು ಸರ್ಕಾರ ಕಾರಣ
ಮೈಸೂರಿನ ಮುನೇಶ್ವರ ನಗರವನ್ನು ಸಂಪೂರ್ಣ ವಕ್ಫ್‌ಗೆ ನೀಡಲು ಸಿದ್ಧತೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರೀತಿ ಮಾಡುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಹಾಳಾಗಲಿದೆ. ಇದಕ್ಕೆ ಸರ್ಕಾರವೇ ನೇರ ಕಾರಣವಾಗಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಹಿಂದೂಗಳಿಗೆ ಒಂದೇ ಮದುವೆಯಾಗುವಂತೆ ಕಾನೂನು ತರಲಾಯಿತು. ಆದರೆ ಮುಸ್ಲಿಮರಿಗೆ ಈ ಕಾನೂನು ಅನ್ವಯವಾಗಲಿಲ್ಲ. ಅಲ್ಲಿಂದಲೇ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಪರವಾಗಿ ಕಾನೂನುಗಳನ್ನು ಜಾರಿ ಮಾಡಿತು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಕ್ಫ್ ಮಂಡಳಿಗೆ ಸಂಪೂರ್ಣ ಅಧಿಕಾರ ನೀಡುವಂತೆ ಕಾನೂನು ತಿದ್ದುಪಡಿ ತಂದರು. ಅದಾದ ನಂತರ 1ಲಕ್ಷ ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಭೂಮಿ ಒಂದೇ ಬಾರಿಗೆ ವಕ್ಫ್ ಮಂಡಳಿಗೆ ಸೇರಿಬಿಟ್ಟಿತು. ಇವೆಲ್ಲವನ್ನೂ ವ್ಯವಸ್ಥಿತವಾಗಿದೆ ಮಾಡಲಾಗಿದೆ ಎಂದು ದೂರಿದರು.
ವಕ್ಫ್ ಮಂಡಳಿಯದ್ದು ಸಮಸ್ಯೆಯೇ ಅಲ್ಲವೆಂದರೆ, ರೈತರು ಹಾಗೂ ಮಠಗಳ ಸ್ವಾಮೀಜಿಗಳು ಪ್ರತಿಭಟನೆ ಏಕೆ ಮಾಡುತ್ತಿದ್ದಾರೆ? ಬಿಜೆಪಿ ಸಚಿವರು ಎಂದಿಗೂ ಪ್ರತಿ ಜಿಲ್ಲೆಗೆ ಹೋಗಿ ನೋಟಿಸ್ ಕೊಡಲು ಸೂಚನೆ ನೀಡಿರಲಿಲ್ಲ. ಆದರೆ ಈಗಿನ ಸಚಿವ ಜಮೀರ್ ಅಹ್ಮದ್ ಪ್ರತಿ ಜಿಲ್ಲೆಗೆ ಹೋಗಿ ಅಧಿಕಾರಿಗಳನ್ನು ಬೆದರಿಸಿ ನೋಟಿಸ್ ಕೊಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕಾನೂನಿನಲ್ಲಿ ತಿದ್ದುಪಡಿ ತಂದು ಈ ತಪ್ಪು ಕೆಲಸವನ್ನು ಸರಿ ಪಡಿಸಲಿದ್ದಾರೆ ಎಂದು ಹೇಳಿದರು.
ತುಷ್ಕೀಕರಣದಿಂದಲೇ ವಕ್ಫ್ ಮಂಡಳಿಗೆ ಪರಮಾಧಿಕಾರ
ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿದ್ದ ಪ್ರಧಾನಿ ನೆಹರು ಕಾಲದಲ್ಲೇ ಧರ್ಮಾಧಾರಿತವಾಗಿ ದೇಶವನ್ನು ವಿಭಜನೆ ಮಾಡಲಾಯಿತು. ಅದೇ ಮಾದರಿಯಲ್ಲಿ ತುಷ್ಟೀಕರಣವನ್ನು ಮಾಡಿ ವಕ್ಫ್ ಮಂಡಳಿಗೆ ಪರಮಾಧಿಕಾರ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಜಮೀರ್ ಅಹ್ಮದ್ ಭೂಮಿ ಕಬಳಿಕೆಗೆ ಆದೇಶ ನೀಡಿದ್ದಾರೆ. ಇದರಿಂದಾಗಿ ರಾಜ್ಯದ ರೈತರು ಚಿಂತೆಗೀಡಾಗಿದ್ದಾರೆ. ಭೂಮಿ ಕಳೆದುಕೊಳ್ಳುವ ಭಯದಲ್ಲಿ ಜೀವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.












Click it and Unblock the Notifications