ಜಮೀರ್ ಅಹಮದ್ ಶಿಷ್ಯನಿಗೆ ವಕ್ಫ್ ಬೋರ್ಡ್ ಅಧ್ಯಕ್ಷ ಪಟ್ಟ
ಮೈಸೂರು, ಜೂನ್ 27; ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಬಳಿಕ ಭುಗಿಲೆದ್ದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ತನ್ವಿರ್ ಸೇಠ್ ನಡುವಿನ ಮುಸುಕಿನ ಗುದ್ದಾಟ ಇದೀಗ ಮತ್ತೊಮ್ಮೆ ಸದ್ದಿಲ್ಲದೆ ಸ್ಪೋಟಗೊಂಡಿದೆ.
Recommended Video
ಕಳೆದ ಬಾರಿ ಪಾಲಿಕೆ ಮೇಯರ್ ಚುನಾವಣೆ ಮೈತ್ರಿ ವಿಚಾರದಲ್ಲಿ ಸಿದ್ದರಾಮಯ್ಯ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದ ತನ್ವೀರ್ ಸೇಠ್ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದರು. ಇದೀಗ ಶಾಸಕ ತನ್ವೀರ್‌ಸೇಠ್‌ಗೆ ಬಿಗ್ ಶಾಕ್ ಕೊಟ್ಟಿರುವ ಸಿದ್ದರಾಮಯ್ಯ ಅಂಡ್ ಟೀಂ, ಶಾಸಕ ಜಮೀರ್ ಅಹಮದ್ ಬೆಂಬಲಿಗನಿಗೆ ವಕ್ಫ್ ಬೋರ್ಡ್ ಅಧ್ಯಕ್ಷ ಪಟ್ಟ ನೀಡಿದೆ.
ಮೈಸೂರು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಶಾಸಕ ತನ್ವೀರ್ ಸೇಠ್ ತಮ್ಮ ಬೆಂಬಲಿಗ ಅಬ್ದುಲ್ ಖಾದರ್ ಹೆಸರು ಶಿಫಾರಸು ಮಾಡಿದ್ದರು. ಆದರೆ ಅಧ್ಯಕ್ಷರ ನೇಮಕದಲ್ಲಿ ತನ್ವೀರ್‌ಸೇಠ್‌ಗೆ ದೊಡ್ಡಮಟ್ಟದ ಶಾಕ್ ಕೊಟ್ಟ ಸಿದ್ದರಾಮಯ್ಯ, ಶಾಸಕ ಜಮೀರ್ ಅಹಮದ್ ಆಪ್ತ ಅಕ್ರಂಗೆ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ಕೊಡಿಸಿದ್ದು, ಆ ಮೂಲಕ ತಮ್ಮ ಎದುರಾಳಿಗಳು ಹಾಗೂ ವಿರೋಧಿಗಳಿಗೆ ತಮ್ಮ ಪ್ರಾಬಲ್ಯ ಏನೆಂದು ತೋರಿಸಿದ್ದಾರೆ.

ರಾಜ್ಯ ವಕ್ಪ್‌ಬೋರ್ಡ್ ಸದಸ್ಯ, ಮೈಸೂರು ವಿಭಾಗದ ಉಸ್ತುವಾರಿ ಹೊತ್ತಿರುವ ಶಾಸಕ ತನ್ವೀರ್ ಸೇಠ್, ವಕ್ಫ್‌ಬೋರ್ಡ್ ಹಿಡಿತ ಹೊಂದಿದ್ದರು. ಆದರೆ ತನ್ವೀರ್ ಸೇಠ್ ಅರಿವಿಗೆ ಬಾರದ ರೀತಿಯಲ್ಲಿ ಸಿದ್ದರಾಮಯ್ಯರ ಮೂಲಕ ಆನಂದ್‌ಸಿಂಗ್‌ಗೆ ತಮ್ಮ ಶಿಷ್ಯ ಅಕ್ರಂ ಹೆಸರನ್ನು ಶಿಫಾರಸು ಮಾಡಿಸುವಲ್ಲಿ ಯಶಸ್ವಿಯಾಗಿರುವ ಜಮೀರ್ ಅಹಮದ್, ಮೈಸೂರು ಭಾಗದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ, "ನಾನು ಸಿಎಂ ಆಕಾಂಕ್ಷಿ, ಆದರೆ ನಾನು ಬೆಂಬಲಿಗರಿಂದ ಮುಂದಿನ ಸಿಎಂ ಅಂತ ಹೇಳಿಸಲ್ಲ" ಎನ್ನುವ ಮೂಲಕ ಶಾಸಕ ತನ್ವೀರ್ ಸೇಠ್, ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದರು. ತನ್ವೀರ್ ಸೇಠ್ ಈ ಹೇಳಿಕೆ ಶಾಸಕ ಜಮೀರ್ ಅಹಮದ್ ಸೇರಿದಂತೆ ಸಿದ್ದು ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಸಿದ್ದು ಕೆಣಕಿದ ತನ್ವೀರ್ ಸೇಠ್‌ಗೆ ತಕ್ಕ ಉತ್ತರ ನೀಡುವ ಲೆಕ್ಕಾಚಾರಕ್ಕೆ ಕೈಹಾಕಿದ ಜಮೀರ್ ಅಹಮದ್, ತಮ್ಮ ಶಿಷ್ಯ ಅಕ್ರಂ ಅನ್ನು ವಕ್ಫ್ ಬೋರ್ಡ್ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ಒಂದೇ ಏಟಿಗೆ ಎರಡು ಹಕ್ಕಿ ಹೊಡೆದಿರುವ ಜಮೀರ್ ಅಹಮದ್, ಶಾಸಕ ತನ್ವೀರ್ ಸೇಠ್ ಪ್ರತಿನಿಧಿಸುವ ಎನ್. ಆರ್. ಕ್ಷೇತ್ರದಲ್ಲಿ ಹೆಚ್ಚಿರುವ ಮುಸ್ಲಿಂ ಮತಗಳನ್ನು ಸೆಳೆಯುವ ತಂತ್ರ ಸಹ ರೂಪಿಸಿದ್ದಾರೆ. ಇದಕ್ಕಾಗಿ ವಕ್ಫ್ ಬೋರ್ಡ್‌ನಲ್ಲಿ ಹಿಡಿತ ತಪ್ಪಿಸಿದರೆ ತನ್ವೀರ್ ಸೇಠ್ ಸೈಡ್‌ಲೈನ್ ಆಗುವ ಲೆಕ್ಕಾಚಾರ ಹಾಕಿ, ನರಸಿಂಹರಾಜ ಕ್ಷೇತ್ರದಲ್ಲೂ ಹಿಡಿತ ಸಾಧಿಸುವುದು ರಣತಂತ್ರವಾಗಿದೆ.












Click it and Unblock the Notifications