ಮೈಸೂರು ರಾಜ ವಂಶಸ್ಥ ಯದುವೀರ್ ರಾಜಕೀಯಕ್ಕೆ ಅಖಾಡಕ್ಕೆ?
ಮೈಸೂರು, ಆಗಸ್ಟ್ 27: ಕೆಲ ವರ್ಷಗಳಿಂದಲೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದ ಮೈಸೂರು ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇತ್ತೀಚಿಗೆ ಮಾಡಿರುವ ಟ್ವೀಟ್ ಒಂದು ಸಂಚಲನಕ್ಕೆ ಕಾರಣವಾಗಿದೆ.
ಕಳೆದ ವರ್ಷ ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಯದುವೀರ್, ರಾಜಕೀಯ ಪ್ರವೇಶ ಮಾಡುತ್ತಾರಾ? ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೋ... ಸದ್ಯ ಆ ಬಗ್ಗೆ ಏನನ್ನೂ ಚಿಂತನೆ ಮಾಡಿಲ್ಲ. ರಾಜಕೀಯಕ್ಕೆ ನೋ ಎಂಟ್ರಿ ಎಂದು ನಗುತ್ತಲೇ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಹಬ್ಬಿರುವ ವಿಷಯಕ್ಕೆ ಅಂತ್ಯವಾಡಿದ್ದರು.
ಆದರೆ ಅವರ ಟ್ವೀಟ್ ನಲ್ಲಿ ಶುಡ್ ಐ ಜಾಯಿನ್ ಪಾಲಿಟಿಕ್ಸ್ ಎಂಬ ಪ್ರಶ್ನೆ ಕೇಳಿರುವುದು ಅವರ ರಾಜಕೀಯ ನಿಲುವನ್ನು ಬದಲಾಯಿಸಿದ್ದಾರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ಸಾರ್ವಜನಿಕ ಅಭಿಪ್ರಾಯ ಕೇಳಿದ ಯದುವೀರ್ ಒಡೆಯರ್
ತಮ್ಮ ಟ್ವೀಟ್ ನಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ‘Should I join Politics?' (ನಾನು ರಾಜಕೀಯಕ್ಕೆ ಪ್ರವೇಶ ಮಾಡಬೇಕೆ?) ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಆಯ್ಕೆಯನ್ನು ಜನರಿಗೆ ಬಿಟ್ಟಿದ್ದಾರೆ. ತಾವು ರಾಜಕೀಯಕ್ಕೆ ಬರಬೇಕೋ, ಬೇಡವೋ ಎಂದು ಸಾರ್ವಜನಿಕರು ಏನು ಹೇಳುತ್ತಾರೆ, ಅವರ ಅಭಿಪ್ರಾಯ ಏನು ಎಂಬುದನ್ನು ಇವರು ಬಯಸಿದ್ದಾರೆ.
ಯದುವೀರ್ ಅವರ ರಾಜಕೀಯ ಪ್ರವೇಶದ ಟ್ವೀಟ್ ಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಬೇಡ ರಾಜಕೀಯ ತುಂಬಾ ಹೊಲಸು, ಅದರಲ್ಲಿ ಪ್ರವೇಶ ಮಾಡಬೇಡಿ ಎಂದೇ ಹೇಳಿದ್ದಾರೆ.

ವ್ಯಕ್ತಿ ತಪ್ಪು ಮಾಡಿದಾಗಲೂ ಸಮ್ಮನಿರಬೇಕಾಗುತ್ತದೆ
‘ರಾಜಕೀಯ ಪಕ್ಷಕ್ಕೆ ಸೇರಿಕೊಂಡರೆ, ಕೆಲವೊಮ್ಮೆ ಆ ಪಕ್ಷವು ತಪ್ಪು ಮಾಡಿದಾಗ ಅದರ ವಿರುದ್ಧ ಮಾತನಾಡಲು ಸ್ವತಂತ್ರ ಇರುವುದಿಲ್ಲ ಮತ್ತು ಆ ಪಕ್ಷದ ಯಾವುದೇ ವ್ಯಕ್ತಿ ತಪ್ಪು ಮಾಡಿದಾಗ ಆ ವ್ಯಕ್ತಿ ಮಾಡಿದ್ದು ತಪ್ಪು ಎಂಬ ಅರಿವಿದ್ದು, ಅವರ ಪರ ವಹಿಸಿಕೊಂಡು ಮಾತನಾಡಬೇಕಾಗುತ್ತದೆ' ಎಂದು ಹೇಳಿದ್ದಾರೆ.

ನಿಮ್ಮ ಪರಿವಾರವನ್ನು ದೇವರಂತೆ ಕಾಣುತ್ತಿದ್ದೇವೆ
"ನಿಮ್ಮಂಥವರು ಒಬ್ಬ ಪಕ್ಷದ ಕಡೆಯವರು ಎಂದು ಎನಿಸಿಕೊಳ್ಳುದುವದಕ್ಕಿಂತ ನೀವು ನೀವಾಗಿ ಅದರಲ್ಲಿಯೂ ಮೈಸೂರು ಸಂಸ್ಥಾನದ ಗುರುತಾಗಿರುವುದು ಶ್ರೇಷ್ಠ ಎಂಬುದು ನನ್ನ ಅನಿಸಿಕೆ' ಎಂದು ಬಸವರಾಜ್ ಎನ್ನುವವರು ಹೇಳಿದ್ದರೆ, ‘ಬೇಡ ಸರ್, ನಿಮ್ಮ ಪರಿವಾರವನ್ನು ದೇವರಂತೆ ಕಾಣುತ್ತಿದ್ದಾರೆ, ಅದನ್ನೇ ಕಾಪಾಡಿಕೊಳ್ಳಿ. ರಾಜಕೀಯ ತುಂಬಾ ಹೊಲಸು ಎಂದು ಸಂತೋಷ್ ಎನ್ನುವವರು ಹೇಳಿದ್ದಾರೆ.

ರಾಜಕೀಯಕ್ಕೆ ಬರಬೇಡಿ ಎಂದು ಅಭಿಮತ
ಸನಾತನದ ಧರ್ಮಾದಿಷ್ಠಿತ, ನೈತಿಕತೆಯ, ವಿಶಾಲ, ಸಾತ್ವಿಕ, ದೂರದೃಷ್ಟಿಯ ಅಡಳಿತ ನೀಡಿದ ಮೈಸೂರು ಸಂಸ್ಥಾನದ ಕುಡಿ ನೀವು. ಅಧರ್ಮಿ, ಭ್ರಷ್ಟ, ಸ್ವಾರ್ಥದಿಂದ ಕೂಡಿದ ಜಾತ್ಯಾತೀತ ವ್ಯವಸ್ಥೆಯಲ್ಲಿ ನಿಮ್ಮ ಪೂರ್ವಜರು ನೀಡಿದ ಆದರ್ಶ ಆಡಳಿತವನ್ನು ನೀಡಲು ಅಸಾಧ್ಯ ಎಂದಿರುವ ಮೋಹನ ಗೌಡ ಎನ್ನುವವರು ರಾಜಕೀಯಕ್ಕೆ ಬರಬೇಡಿ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ ಬಹುತೇಕ ಎಲ್ಲಾ ಕಮೆಂಟಿಗರೂ ರಾಜಕೀಯಕ್ಕೆ ಬರಬೇಡಿ ಎಂದು ಸಲಹೆ ಮಾಡಿದ್ದರೆ, ಒಬ್ಬರು ಇದು ಫೇಕ್ ಅಕೌಂಟ್, ರಿಪ್ಲೈ ಮಾಡಬೇಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications