ಕೆಲಸ ಸರಿಯಾಗಿಲ್ಲ ಎಂದಿದ್ದಕ್ಕೆ ಕಾರ್ಮಿಕರು ಮಾಲೀಕನಿಗೆ ಮಾಡಿದ್ದೇನು?
ಮೈಸೂರು, ಫೆಬ್ರವರಿ 12: ಮನೆಯ ನೀರಿನ ಕೊಳಾಯಿ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎಂದು ಮನೆಯ ಮಾಲೀಕ ಆಕ್ಷೇಪಿಸಿದ್ದಕ್ಕೆ ಕೋಪಗೊಂಡ ಕೆಲಸಗಾರರು ಮನೆ ಮಾಲೀಕನನ್ನೇ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಗ್ರಾಮದಲ್ಲಿ ನಡೆದಿದೆ.
ಕಂಪಲಾಪುರ ನಿವಾಸಿಯಾದ ಡಿ.ಕಾಂತರಾಜು (44) ಹೊಸ ಮನೆಯೊಂದನ್ನು ಕಟ್ಟಿಸುತ್ತಿದ್ದರು, ಇದಕ್ಕೆ ಪ್ಲಂಬಿಂಗ್ ಕೆಲಸಕ್ಕೆ ಅದೇ ಗ್ರಾಮದ ರಾಜು ಮತ್ತು ಅವನ ಸಹೋದರ ಸಂತೋಷ್ ಎಂಬುವವರಿಗೆ ಗುತ್ತಿಗೆ ನೀಡಿದ್ದರು.
ಆದರೆ ಪ್ಲಂಬಿಂಗ್ ಕೆಲಸ ಸರಿಯಾಗಿ ಮಾಡದಿದ್ದುದರಿಂದ ಪೈಪ್ ಗಳಲ್ಲಿ ನೀರು ಸೋರುತಿತ್ತು. ಇದಕ್ಕಾಗಿ ಮನೆ ಮಾಲೀಕ ಕಾಂತರಾಜು, ಕೆಲಸಗಾರ ರಾಜುವನ್ನು ತರಾಟೆಗೆ ತೆಗೆದುಕೊಂಡಿದ್ದರು. ಊರಿನ ಸರ್ಕಲ್ನಲ್ಲೂ ಇದು ಮುಂದುವರೆದಿದೆ.

ಇದರಿಂದ ಅವಮಾನಿತರಾದ ರಾಜು ಮತ್ತು ಸಂತೋಷ್ ಮಾರಕಾಸ್ತ್ರದಿಂದ ಕಾಂತರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಕಾಂತರಾಜು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಹಲ್ಲೆ ನಡೆಸಿದ ರಾಜುನನ್ನು ಬಂಧಿಸಿರುವ ಪಿರಿಯಾಪಟ್ಟಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈತನ ತಮ್ಮ ತಲೆಮರಿಸಿಕೊಂಡಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications