ಜಿಟಿ ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು
ಮೈಸೂರು, ಮೇ 7 : ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಜೆಡಿಎಸ್‌ಗೆ ಮತ ನೀಡುವಂತೆ ಮನವಿ ಮಾಡಿರುವ ಶಾಸಕ ಜಿ.ಟಿ. ದೇವೇಗೌಡ ತಮ್ಮ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ತಮ್ಮ ಬಿರುಸಿನ ಪ್ರಚಾರ ಮುಂದುವರೆಸಿದರು.
ಜಯದೇವನಗರದಿಂದ ಪ್ರಚಾರ ಆರಂಭಿಸಿದ ಅವರು, ರೈತ ಸಾಲ ಸಂಪೂರ್ಣ ಮನ್ನಾ, ಗರ್ಭಿಣಿಯರಿಗೆ 6 ಸಾವಿರ ಮಾಸಿಕ ಪ್ರೋತ್ಸಾಹ ಧನ, ವಿಕಲ ಚೇತನರು, ವೃದ್ಧಾಪ್ಯರಿಗೆ ಹೆಚ್ಚಿನ ಪಿಂಚಣಿ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ನಿರುದ್ಯೋಗ ನಿವಾರಣೆಗೆ ಹಲವು ಕಾರ್ಯಕ್ರಮಗಳನ್ನು ಜೆಡಿಎಸ್ ಹಮ್ಮಿಕೊಂಡಿದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವ ಮೂಲಕ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದ್ದಾರೆ ಎಂದು ಹೇಳಿದರು.
ಇತ್ತ ಜಿಟಿಡಿಗೆ ಫುಲ್ ಕ್ಲಾಸ್ : ಚುನಾವಣೆ ಸಮೀಪಿಸುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದ ಕಾವು ಏರುತ್ತಲೇ ಇದ್ದು, ನಿನ್ನೆ ದರ್ಶನ್ ಗೆ ಫೇರಾವ್ ಹಾಕಿದ್ದ ನಾಗನಹಳ್ಳಿ ಗ್ರಾಮದಲ್ಲಿ ಮಹಿಳೆಯರು ಶಾಸಕ ಜಿ.ಟಿ.ದೇವೇಗೌಡರಿಗೂ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಶನಿವಾರ ನಟ ದರ್ಶನ್ ನಾಗನಹಳ್ಳಿಗೆ ಬರದಂತೆ ಜೆಡಿಎಸ್ ಕಾರ್ಯಕರ್ತರು ತಡೆದಿದ್ದ ಕಾರಣ ಕಾಂಗ್ರೆಸ್ ಹಾಗೂ ಜೆಡಿಎಸ್ ಮಾತಿಗೆ ಮಾತು ಬೆಳೆದು ಕೈ ಮಿಲಾಯಿಸಿ ಕೊಂಡು ಮೂವರು ಆಸ್ಪತ್ರೆಗೆ ದಾಖಲಾಗಿದ್ದರು. ಜಿ.ಟಿ.ದೇವೇಗೌಡರು ನಾಗನಹಳ್ಳಿಗೆ ಆಗಮಿಸಿದಾಗ ಆಸ್ಪತ್ರೆಗೆ ದಾಖಲಾಗಿದ್ದ ಯುವಕರ ತಾಯಂದಿರು ಜಿ.ಟಿ.ದೇವೇಗೌಡರ ಕಾರನ್ನು ಅಡ್ಡಗಟ್ಟಿ ಗ್ರಾಮದಲ್ಲಿ ಈ ರೀತಿಯ ಗಲಾಟೆ ನಿಮ್ಮಿಂದಲೇ ಆಗುತ್ತಿದೆ ಎಂದು ತರಾಟೆ ತೆಗೆದುಕೊಂಡರು.
ಈ ವೇಳೆ ಮಹಿಳೆಯರಿಗೆಸಮಾಧಾನ ಪಡಿಸಲು ಮುಂದಾದ ಜಿ.ಟಿ. ದೇವೇಗೌಡರಿಗೆ ಮಹಿಳೆಯರು ಘಟನೆಗೆ ನೀವೇ ಕಾರಣವೆಂದು ಪಟ್ಟು ಹಿಡಿಯುತ್ತಿದ್ದಂತೆ ಕುಪಿತಗೊಂಡ ಜಿಟಿಡಿ ಸ್ಥಳದಿಂದ ತೆರಳಿದ್ದಾರೆಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಪರ ನಟ ದರ್ಶನ್ ಮೈಸೂರು ತಾಲೂಕಿನ ನಾಗನಹಳ್ಳಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ ಬೆನ್ನಲ್ಲೇ ಕಳೆದೆರಡು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಎಂಟು ಮಂದಿ ಗಾಯಗೊಂಡಿದ್ದಾರೆ.
ಗ್ರಾಮದ ನಿವಾಸಿಗಳಾದ ಜಯದೇವ, ವಿದ್ಯಾಶಂಕರ್, ಲೋಹಿತ್, ಅರ್ಜುನ್, ಅಭಿಷೇಕ್, ಉಮಾ ಶಂಕರ್, ಅನಿಲ್ ಕುಮಾರ್, ರಜತ್ ಮಂದಿ ಗಾಯಗೊಂಡವರು. ಇವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಬೆಳಗ್ಗೆ ಸಿಎಂ ಪರ ನಟ ದರ್ಶನ್ ಪ್ರಚಾರ ನಡೆಸಲು ಆಗಮಿಸಿದಾಗ ಕೆಲ ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದರು. ಇದರಿಂದ ಕುಪಿತಗೊಂಡ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿದ್ದರು. ಪ್ರತಿಭಟನೆಯ ನಡುವೆಯೂ ದರ್ಶನ್ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದ್ದರು.












Click it and Unblock the Notifications