ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮಹಿಳಾ ಮೀಸಲಾತಿಗೆ ಬೆಲೆಯಿಲ್ಲ!
ಮೈಸೂರು, ಜುಲೈ 8: ಪದೇ ಪದೇ ಎಡವಟ್ಟು ಮಾಡಿಕೊಳ್ಳುತ್ತಿರುವ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕೆಎಸ್ಒಯು) ಈಗ ಮತ್ತೆ ಸುದ್ದಿಯಲ್ಲಿದೆ.
ಮುಕ್ತ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಸದಸ್ಯರನ್ನಾಗಿ 5 ಮಂದಿಯನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿರುವುದು ಈಗ ವಿವಾದಕ್ಕೆ ಎಡೆಮಾಡಿದೆ. ಕರ್ನಾಟಕ ಮುಕ್ತ ವಿವಿ ಕಾಯ್ದೆ ಪ್ರಕಾರ ಆಡಳಿತ ಮಂಡಳಿ ಸದಸ್ಯರನ್ನು ನೇಮಕ ಮಾಡುವಾಗ ಮಹಿಳೆಯರಿಗೆ ಮೀಸಲು ಕಡ್ಡಾಯ. ಆದರೆ ಸರಕಾರ ಹೊರಡಿಸಿರುವ ನೇಮಕದ ಅದೇಶದಲ್ಲಿನ ಎಲ್ಲಾ 5 ಮಂದಿಯೂ ಪುರುಷರೇ ಆಗಿರುವುದು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿರುವ ಅಧಿಸೂಚನೆ ಪ್ರಕಾರ, ಕೆ.ಎಸ್.ಶಿವರಾಮು (ಹಿಂದುಳಿದ ವರ್ಗ 2 A), ಚಂದ್ರಶೇಖರ್ ಎಂ.ಎಚ್. (ಸಾಮಾನ್ಯ), ರಾಚಯ್ಯ (ಪರಿಶಿಷ್ಠ ಜಾತಿ), ರಾಮಣ್ಣ ಸಾಲಭಾವಿ (ಹಿಂದುಳಿದ ವರ್ಗ 2 A) ಹಾಗೂ ಹಜರತ್ ಆಲಿ ಎಫ್ ಗೊರವಕೊಳ್ಳ (ಅಲ್ಪಸಂಖ್ಯಾತ) ಅವರನ್ನು ಕೆಎಸ್ಒಯು ಆಡಳಿತ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈ ಪೈಕಿ ಮೊದಲ ಮೂರು ಮಂದಿ ಹಳೇ ಮೈಸೂರು ಭಾಗಕ್ಕೆ ಸೇರಿದವರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಕಾಯ್ದೆಯ ಅನ್ವಯ ಇಂಥ ನೇಮಕದ ವೇಳೆ ಮೀಸಲು ನಿಯಮ ಪಾಲಿಸಬೇಕು. ಅದರಂತೆ ಇಬ್ಬರು ಮಹಿಳಾ ಸದಸ್ಯರನ್ನು ನೇಮಕ ಮಾಡಬೇಕು. ವಿವಿಯ ಈ ಹಿಂದಿನ ಬಿಒಎಂ ಸದಸ್ಯರನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಹಾಗಾಗಿ ರಾಜ್ಯ ಸರಕಾರ ಮುಕ್ತ ವಿವಿ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಈ ನೇಮಕ ಮಾಡಿದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.
ನಮಗೆ ಆದೇಶದ ಪ್ರತಿಯೇ ಸಿಕ್ಕಿಲ್ಲ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಗೆ ನೂತನವಾಗಿ 5 ಮಂದಿಯನ್ನು ಸದಸ್ಯರನ್ನಾಗಿ ರಾಜ್ಯ ಸರಕಾರ ನೇಮಕ ಮಾಡಿರುವ ಸಂಬಂಧ ವಿವಿಗೆ ಯಾವುದೇ ಆದೇಶ ಬಂದಿಲ್ಲ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಉಪಕುಲಪತಿ ಪ್ರೊ.ಶಿವಲಿಂಗಯ್ಯ ಸ್ಪಷ್ಟಪಡಿಸಿದರು.

ಕೆಎಸ್ ಒಯುಗೆ ಆಡಳಿತ ಮಂಡಳಿ ಸದಸ್ಯರನ್ನಾಗಿ 5 ಮಂದಿಯನ್ನು ನೇಮಕ ಮಾಡಿರುವ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ವರದಿ ಗಮನಿಸಿದ್ದೇನೆ. ಆದರೆ ವಿವಿಗೆ ಈ ತನಕ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಮುಕ್ತವಿವಿ ಕಾಯ್ದೆ ಉಲ್ಲಂಘಿಸಿ ಬರೀ ಪುರುಷರನ್ನೇ ಆಡಳಿತ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿರುವ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ಮಾಹಿತಿ ಇಲ್ಲ. ಕಾಯ್ದೆ ಪರಿಶೀಲಿಸಿ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದರು.












Click it and Unblock the Notifications