ಸಚಿವರು ಆಯೋಜಿಸಿದ ಬಾಡೂಟದಲ್ಲಿ ನೂಕುನುಗ್ಗಲು: ವೃದ್ಧೆಯ ಕಾಲು ಮುರಿತ
ಮೈಸೂರು, ಜೂನ್ 5: ಭರ್ಜರಿ ಬಾಡೂಟ ಸವಿಯಲು ತೆರಳಿದ್ದ ವೇಳೆ ನೂಕು-ನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ ವೃದ್ದೆ ಕಾಲು ಮೂಳೆ ಮುರಿದಿರುವ ಘಟನೆ ಟಿ.ನರಸಿಪುರದಲ್ಲಿ ನಡೆದಿದೆ.
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಆಯೋಜಿಸಿದ್ದ ಕೃತಜ್ಞತಾ ಸಮಾರಂಭದ ಬಾಡೂಟದ ವೇಳೆ ಘಟನೆ ನಡದಿದೆ. ತಿ.ನರಸೀಪುರ ತಾಲೂಕಿನ ಹೆಳವರ ಹುಂಡಿ ಸಮೀಪ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿಗೆ ಬಾಡೂಟ ಆಯೋಜನೆ ಮಾಡಲಾಗಿತ್ತು ಬಾಡೂಟಕ್ಕೆ ಕಾರ್ಯಕರ್ತರ ನೂಕು ನುಗ್ಗಲಲ್ಲಿ ಕೆಳಕ್ಕುರುಳಿದ 66 ವರ್ಷದ ಚಿಕ್ಕಮುತ್ತಮ್ಮ ಕಾಲ್ತುಳಿತಕ್ಕೆ ಸಿಲುಕಿದ್ದಾರೆ.

ಕಾಲ್ತುಳಿತಕ್ಕೆ ಸಿಲುಕಿದ ಚಿಕ್ಕಮುತ್ತಮ್ಮ ಬಲಗಾಲ ಮೂಳೆ ಮುರಿದಿದೆ. ಅಲ್ಲಿಯೇ ಇದ್ದ ಯುವಕರಿಂದ ಚಿಕ್ಕ ಮುತ್ತಮ್ಮ ರಕ್ಷಣೆ ಮಾಡಿ ಅಂಬುಲೆನ್ಸ್‌ಗೆ ಕರೆ ಮಾಡಲಾಗಿದೆ. ಆದರೆ ಟ್ರಾಫಿಕ್ ಜಾಮ್‌ನಿಂದಾಗಿ ಸಮಯಕ್ಕೆ ಅಂಬುಲೆನ್ಸ್ ಬರಲಿಲ್ಲ. ಅಂತಿಮವಾಗಿ
ತಿ. ನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈಜಲು ಹೋದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು
ಚಾಮರಾಜನಗರ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಎಣ್ಣೆಹೊಳೆ ಕೆರೆಯಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರದ ಸಿದ್ದರಾಜು(19) ಮೃತ ದುರ್ದೈವಿ.
ಸಿದ್ದರಾಜು ನಾಲ್ವರು ಸ್ನೇಹಿತರೊಂದಿಗೆ ಭಾನುವಾರ ಈಜಲು ತೆರಳಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೇಲೆ ಬರಲಾರದೇ ಅಸುನೀಗಿದ್ದಾನೆ. ಸಿದ್ದರಾಜು ಇತ್ತೀಚೆಗಷ್ಟೇ ಮೈಸೂರಿನ ಕಾಲೇಜೊಂದಕ್ಕೆ ಬಿಎ ಪದವಿಗಾಗಿ ಪ್ರವೇಶ ಪಡೆದಿದ್ದ ಎಂದು ತಿಳಿದುಬಂದಿದೆ.
ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಮ್ಸ್‌ಗೆ ರವಾನೆ ಮಾಡಲಾಗಿದೆ.

ವಿದ್ಯುತ್ ಪ್ರವಹಿಸಿ 12 ವರ್ಷದ ಬಾಲಕಿ ಸಾವು
ಚಾಮರಾಜನಗರ: ವಿದ್ಯುತ್ ಪ್ರವಹಿಸಿ 12 ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಡಹಳ್ಳಿ ಗ್ರಾಮದ ವಿದ್ಯಾ(12) ಮೃತ ದುರ್ದೈವಿ.
ಮನೆಯಲ್ಲಿದ್ದ ನೀರಿನ ಪಂಪ್ ಸ್ವಿಚ್ ಆಫ್ ಮಾಡಲು ತೆರಳಿದ್ದ ವೇಳೆ ವಿದ್ಯುತ್ ಪ್ರವಹಿಸಿದೆ ಎಂದು ತಿಳಿದುಬಂದಿದೆ. ಒದ್ದೆ ಬಟ್ಟೆ ಧರಿಸಿದ್ದರಿಂದ ವಿದ್ಯುತ್ ಶಾಕ್‌ನ ಪರಿಣಾಮ ಹೆಚ್ಚು ಬೀರಿದೆ. ವಿದ್ಯಾಳನ್ನು ಕೂಡಲೇ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರೂ ದುರಾದೃಷ್ಟವಶಾತ್ ಸಾವನ್ನಪ್ಪಿದ್ದಾಳೆ.
ಬಾಲಕಿ ತಂದೆಯ ಮನೆ ಚಾಮರಾಜನಗರ ತಾಲೂಕಿನ ಕುಮಚಳ್ಳಿ ಆಗಿದ್ದು, ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ತಾತನ ಮನೆಗೆ ಬಾಲಕಿಯನ್ನು ಕರೆತರಲಾಗಿತ್ತು. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.












Click it and Unblock the Notifications