ವಿಡಿಯೋ; ನಂಜನಗೂಡಿನಲ್ಲಿ ಅರಣ್ಯಕ್ಕೆ ಬೆಂಕಿ, ಜಿಂಕೆಗಳ ಪರದಾಟ
ಮೈಸೂರು, ಏಪ್ರಿಲ್ 01; ಮೈಸೂರಿನಲ್ಲಿ ಬೇಸಿಗೆಯ ಬಿಸಿ ಜೋರಾಗಿದ್ದು, ಬಿಸಿಲಿನ ತಾಪ ತಡೆಯಲಾರದೆ ಸಾರ್ವಜನಿಕರು ಹೈರಾಣಾಗಿದ್ದಾರೆ. ಇದರ ಜೊತೆಗೆ ಅರಣ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಬೆಂಕಿ ಅವಘಡಗಳಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.
ನಂಜನಗೂಡು ತಾಲೂಕಿನ ಕೋಣನೂರು ಕಿರು ಅರಣ್ಯ ಪ್ರದೇಶಕ್ಕೆ ಬುಧವಾರ ಸಂಜೆ ಮತ್ತೆ ಬೆಂಕಿ ಬಿದ್ದಿದೆ. ಹತ್ತಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ. ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಜಿಂಕೆಗಳು ಮತ್ತು ಕೃಷ್ಣಮೃಗಗಳು ಪರದಾಟ ನಡೆಸಿವೆ.
ಬುಧವಾರ ಸಂಜೆ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಅರಣ್ಯ ಪ್ರದೇಶಕ್ಕೆ ವ್ಯಾಪಿಸಿದೆ. ಹೊಗೆ ಹೆಚ್ಚಾಗಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.

ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದ್ದು, ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ. ಬೆಂಕಿಯ ನರ್ತನಕ್ಕೆ ಪ್ರಾಣಿಗಳು ಕಂಗಾಲಾಗಿವೆ. ಪದೇ ಪದೇ ಈ ರೀತಿಯ ಘಟನೆ ನಡೆಯುತ್ತಿರುವುದು ಸುತ್ತ ಮುತ್ತಲಿನ ಜನರಲ್ಲಿ ಭಯ ಮೂಡಿಸಿದೆ.
ಬೇಸಿಗೆಯಲ್ಲಿ ಬೆಂಕಿ ಅನಾಹುತಗಳು ಹೆಚ್ಚಾಗುತ್ತಿದ್ದು, ಮರಗಿಡಗಳು ಸುಟ್ಟು ಭಸ್ಮವಾಗುತ್ತಿವೆ. ಮಳೆಗಾಲ ಆರಂಭ ಆಗುವ ತನಕ ಇಂತಹ ಪರಿಸ್ಥಿತಿ ಮುಂದುವರಿಯಲಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.












Click it and Unblock the Notifications