ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯತೀಂದ್ರ, ಇದು ಚುನಾವಣೆ ತಯಾರಿಯಾ?
ಮೈಸೂರು, ಜೂನ್ 29 : ಸಿದ್ದರಾಮಯ್ಯ ಅವರ ಮಗ ಅಂತಲೇ ಬಹಳ ಜನಕ್ಕೆ ಗೊತ್ತಿಲ್ಲದ ಮಟ್ಟಿಗೆ ಹೊರಗೆಲ್ಲೂ ಕಾಣಿಸಿಕೊಳ್ಳದೆ ಇದ್ದ ಯತೀಂದ್ರ ಅವರು ಈ ಬಾರಿ ತಮ್ಮ ಜನ್ಮ ದಿನವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳುವ ಮಟ್ಟಿಗೆ ಬದಲಾಗಿದ್ದಾರೆ. ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಹವಾಲು ಕೇಳಿಸಿಕೊಂಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಸೇರಿ ಕ್ಷೇತ್ರದಲ್ಲಿ ಸುತ್ತಾಡಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಮೈಸೂರಿನಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ ಎಂಬುದನ್ನೇ ಈ ಅಂಶಗಳು ಬಿಂಬಿಸುತ್ತವೆ. ಇದಕ್ಕೆ ಪೂರಕ ಎಂಬಂತೆ ಗುರುವಾರ ಹಲವು ಬೆಳವಣಿಗೆಗಳು ಆಗಿವೆ.

ಯತೀಂದ್ರ ಸಿದ್ದರಾಮಯ್ಯ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದು, ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಗುರುವಾರದಿಂದ ತಿರುಗಾಟ ಆರಂಭಿಸಿದ್ದಾರೆ. ಈ ಸಂಬಂಧ ಕ್ಷೇತ್ರದ ಮುಖಂಡರ ಜೊತೆ ಯತೀಂದ್ರ ಅವರು ಚರ್ಚೆ ನಡೆಸಿದ್ದಾರೆ.
ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಯತೀಂದ್ರ, ನಂಜನಗೂಡು, ವರುಣಾ, ಗುಂಡ್ಲುಫೇಟೆ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಪ್ರತಿಕ್ರಿಯೆ ಇದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.
ನಾಳೆಯಿಂದ ತಾಯಿಯ ಸನ್ನಿಧಾನದಲ್ಲಿ ಆಷಾಢದ ಪ್ರಯುಕ್ತ ವಿಶೇಷ ಪೂಜಾ ವಿಧಿ-ವಿಧಾನಗಳು ನಡೆಯಲಿವೆ. ಬಳಿಕ ಆಷಾಢಕ್ಕಾಗಿ ಯಾವ ರೀತಿಯ ತಯಾರಿ ನಡೆಸುತ್ತಿದ್ದಾರೆ, ಭದ್ರತೆಗಳು ಹೇಗಿವೆ ಎಂಬುದರ ಕುರಿತು ಎಲ್ಲ ಮಾಹಿತಿಗಳನ್ನು ಕಲೆಹಾಕಿದರು. ಅಲ್ಲದೇ, ಖುದ್ದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲೇ ಹೇಳುವುದಾದರೆ ಈಗಾಗಲೇ ತಳ ಮಟ್ಟದಿಂದ ಕೆಲಸ ಮಾಡಿಕೊಂಡು ಬಂದಿರುವ, ಈ ಬಾರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸಿರುವ ಕ್ಷೇತ್ರದಿಂದ ಯತೀಂದ್ರ ಅವರು ವಿಧಾನಸಭೆ ಚುನಾವಣೆ ಸ್ಪರ್ಧೆಗೆ ಇಳಿದು, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ವತಃ ಸಿದ್ದರಾಮಯ್ಯ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ.
ಒಟ್ಟಾರೆ ಕುಟುಂಬದಿಂದ ಅಪ್ಪ -ಮಕ್ಕಳು ಈ ಎರಡು ಕ್ಷೇತ್ರದಿಂದ ಸ್ಪರ್ಧಿಸುವುದು ನಿಚ್ಚಳವಾಗಿದೆ. ಅಂದಹಾಗೆ ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮರಿಗೌಡ, ನಜರ್ ಬಾದ್ ನಟರಾಜು, ಗಂಗಾಧರ್, ರಾಕೇಶ್ ಪಾಪಣ್ಣ ಮತ್ತಿತರರು ಡಾ.ಯತೀಂದ್ರ ಜೊತೆಗಿದ್ದರು. ಸಭೆ ನಡೆಸಿದ ಅವರು ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆಲವು ಮಾಹಿತಿಗಳನ್ನು ಪಡೆದುಕೊಂಡರು. ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡರು.












Click it and Unblock the Notifications