ಕುಮಾರಸ್ವಾಮಿಯ ಈ ಗಂಭೀರ ಪ್ರಶ್ನೆಗೆ ಪ್ರಧಾನಿ ಮೋದಿ ಬಳಿ ಉತ್ತರವಿದೆಯೇ?
ಮೈಸೂರು, ಅ 18: ದೇಶ ಮತ್ತು ರಾಜ್ಯ ಇಂದು ಎದುರಿಸುತ್ತಿರುವ ಗಂಭೀರ ವಿಷಯಕ್ಕೆ ಸಂಬಂಧಿಸಿದಂತೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯೊಂದನ್ನು ನೀಡಿದ್ದಾರೆ.
"ಚಾಮುಂಡಿ ಬೆಟ್ಟದಲ್ಲಿನ ಸಾ.ರಾ.ಮಹೇಶ್ ಮತ್ತು ಎಚ್.ವಿಶ್ವನಾಥ್ ನಡುವಿನ ಆಣೆಪ್ರಮಾಣ" ಅನಾವಶ್ಯಕ ಎಂದಿರುವ ಕುಮಾರಸ್ವಾಮಿ, "ದುಡ್ಡು ಕೊಟ್ಟವನು ಯಾರಾದರೂ ದೇವರ ಮುಂದೆ ಬಂದು ಪ್ರಮಾಣ ಮಾಡುತ್ತಾನಾ" ಎಂದು ವ್ಯಂಗ್ಯವಾಡಿದರು.
ಉಗ್ರರು ರಾಜ್ಯದೊಳಗೆ ನುಸುಳಿದ್ದಾರೆ ಎನ್ನುವ ಪ್ರಶ್ನೆಗೆ ಗರಂ ಆದ ಕುಮಾರಸ್ವಾಮಿ, "ನಮ್ಮ ತಂದೆಯೂ ಪ್ರಧಾನಿಯಾಗಿದ್ದರು. ಆ ವೇಳೆ, ಯಾಕೆ ಭಯೋತ್ಪಾದಕರು ನುಸುಳಲಿಲ್ಲ" ಎಂದು ಪ್ರಶ್ನಿಸಿದರು.

"ದೇವೇಗೌಡ್ರು ಪ್ರಧಾನಿಯಾಗಿದ್ದಾಗ, ಒಂದಾದರೂ ಬಾಂಬ್ ಸ್ಫೋಟವಾಗಿದೆಯೇ" ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, "ಆ ಅವಧಿಯಲ್ಲಿ ಕೋಮು ಗಲಭೆಗಳಾದ ಉದಾಹರಣೆ ಇದೆಯೇ" ಎಂದು ಪರೋಕ್ಷವಾಗಿ, ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದರು.
"ಮಕ್ಕಳು ಹಸಿವಿನಿಂದ ನರಳುತ್ತಿದ್ದಾರೆ. ಇಂತಹ ವೇಳೆಯಲ್ಲಿ ಇದಕ್ಕೆ ಸ್ಪಂದಿಸುವುದು ಉತ್ತಮ ಆಡಳಿತಗಾರನ ಲಕ್ಷಣವೋ, ಅಥವಾ, ಚೀನಾ, ಪಾಕಿಸ್ತಾನದ ಬಗ್ಗೆ ತಲೆಕೆಡಿಸಿಕೊಳ್ಳುವುದಾ" ಎಂದು ಕುಮರಸ್ವಾಮಿ ಲೇವಡಿ ಮಾಡಿದರು.
"ಆಡಳಿತ ಶೈಲಿ ಚೆನ್ನಾಗಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ, ಜೊತೆಗೆ, ಭಯದ ವಾತಾವರಣವೂ ಸೃಷ್ಟಿಯಾಗುವುದಿಲ್ಲ"ಎಂದು ಕುಮಾರಸ್ವಾಮಿ, ನಗರದಲ್ಲಿ ಮಾಧ್ಯಮದವರ ಮುಂದೆ, ಹೇಳಿಕೆಯನ್ನು ನೀಡಿದರು.












Click it and Unblock the Notifications