'ಜುಟ್ಟು ಹಿಡಿದು ಸುತ್ತಿಗೆಯಿಂದ ಹೊಡೆದ': ಭಜರಂಗಿ ನಟಿಯ ಭೀಕರ ಹತ್ಯೆ ಹಿಂದಿನ ಕಾರಣವೇನು?
ಬೆಂಗಳೂರು, ಮೇ 22: ಭಜರಂಗಿ, ಜೈ ಮಾರುತಿ 800 ಸೇರಿದಂತೆ ವಿವಿಧ ಕನ್ನಡ ಚಿತ್ರಗಳಲ್ಲಿ ನಟಿಸಿದ ವಿದ್ಯಾ ನಂದೀಶ್ ಕೊಲೆಯಾಗಿದ್ದಾರೆ. ಪತಿ ನಂದೀಶ್ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದ್ಯ ತನಿಖೆ ಮುಂದುವರಿದಿದೆ. ನಟಿ ಹಾಗೂ ಕಾಂಗ್ರೆಸ್ ನಾಯಕಿಯಾಗಿರುವ ವಿದ್ಯಾ ಕೊಲೆ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿದೆ.
ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದೆ ಎಂದು ವಿದ್ಯಾ ತಾಯಿ ಆರೋಪ ಮಾಡಿದರೆ, ಇದೊಂದು ಪ್ರೀ ಪ್ಲಾನ್ಡ್ ಕೊಲೆ ಎಂದು ವಿದ್ಯಾ ಸಾವಿನ ಕ್ಷಣದಲ್ಲಿ ಕೊನೆಯಲ್ಲಿ ಜೊತೆಗಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಆರೋಪಿಸಿದ್ದಾರೆ. ವಿದ್ಯಾ ಕೊಲೆ ನಡೆದಿರುವ ಕ್ಷಣವನ್ನು ವಿವರಿಸಿದ್ದಾರೆ.

ವಿದ್ಯಾ ಹಾಗೂ ನಂದೀಶ್ ನಡುವೆ ಮೊದಲಿನಿಂದಲೂ ಮನಸ್ತಾಪ ಇತ್ತು. ಕೊಲೆ ನಡೆದಿರುವ ದಿನ ಕೂಡ ದೂರವಾಣಿ ಕರೆಯಲ್ಲೂ ವಾಗ್ವಾದ ನಡೆದಿತ್ತು. ಗಂಡನ ಊರು ತುರುಗನೂರಿಗೆ ವಿದ್ಯಾ ಬಂದಿದ್ದರು. ನಾನು ಜೊತೆಯಲ್ಲಿ ಬಂದಿದ್ದೆ. ಇಬ್ಬರ ನಡುವೆ ಮತ್ತೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದಿದೆ. ವಿದ್ಯಾ ಪತಿ ನಂದೀಶ್ ವಿಡಿಯೋ ಮಾಡಿಕೊಳ್ಳುತ್ತಿದ್ದ. ಬಳಿಕ ನಾನು ವಿಡಿಯೋ ಮಾಡಿದ್ದು, ಅರ್ಧತನಕ ವಿಡಿಯೋ ಇದೆ. ಸದ್ಯ ಪೊಲೀಸರಿಗೆ ಆ ವಿಡಿಯೋ ಕೊಡಲಾಗಿದೆ.
ಆಮೇಲೆ ಅವನು ಜುಟ್ಟು ಹಿಡಿದು ಒಳಗೆ ಎಳೆದುಕೊಂಡು ಹೋದ. ಇವರು ಪ್ರೀ-ಪ್ಲಾನ್ ಮಾಡಿದ್ದರು. ಸುತ್ತಿಗೆ ಸಿದ್ಧವಾಗಿತ್ತು. ಅವನ ಮನೆಯಲ್ಲಿ ಆತ, ಅಪ್ಪ, ಅಮ್ಮ ಇದ್ದರು. ಇವರಿಬ್ಬರದು ಆಸ್ತಿ ವಿಚಾರವಾಗಿ ಹಾಗೂ ಡಿವೋರ್ಸ್ ವಿಚಾರವಾಗಿ ಕೇಸ್ ನಡೆಯುತ್ತಿತ್ತು. ಕೊಲೆಯಾದ ದಿನ ಮಾತಿಗೆ ಮಾತು ಬೆಳೆಯಿತು. ಅವವನು ಜುಟ್ಟು ಹಿಡಿದು ಒಳಗೆ ಎಳೆದುಕೊಂಡು ಹೋದ ಅಲ್ಲಿವರೆಗೂ ವಿಡಿಯೋ ಇದೆ. ಬಳಿಕ ಸುತ್ತಿಗೆಯಿಂದ ಎರಡು ಪೆಟ್ಟು ತಲೆಗೆ ಹೊಡೆದಿದ್ದ.

ಅವನ ಅಮ್ಮ ನಾವು ಒಳಗೆ ಹೋಗದಂತೆ ತಡೆದರು. ನಾನು ಬಾಗಿಲು ಒಡೆದು ಒಳಗೆ ಹೋಗುವಷ್ಟರಲ್ಲಿ ಎರಡು ಪೆಟ್ಟು ಹೊಡೆದಿದ್ದ. ಹೊಡಿಬೇಡ ಎಂದು ಕೋಗಾಡಿದರೂ ಕೇಳಲಿಲ್ಲ. ನನ್ನ ಕಣ್ಣ ಮುಂದೆಯೇ ಸುತ್ತಿಗೆಯಲ್ಲಿ ಹೊಡೆದ. ಅವಳು ಕೆಳಗೆ ಬಿದ್ದು ಹೋದಳು. ಹೊಡೆದು ಅವಳನ್ನ ಮುಗಿಸು ಅಂತಾ ಪ್ರೀ-ಪ್ಲಾನ್ ಮಾಡಿದ್ದರು ಎನಿಸುತ್ತಿದೆ. ಈ ವೇಳೆ ಡ್ರೈವರ್ ಪೊಲೀಸರಿಗೆ ಕರೆ ಮಾಡಲು ಹೋದಾಗ, ನಂದೀಶ್ ತಾನೇ ಪೊಲೀಸರಿಗೆ ತಿಳಿಸುತ್ತೇನೆ ಎಂದು ವೆಪನ್ ಸಮೇತ ಎಸ್ಕೇಪ್ ಆದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.
2018ರಲ್ಲಿ ನಂದೀಶ್ ಹಾಗೂ ವಿದ್ಯಾ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಮಗು ಕೂಡ ಇದೆ. ಆದರೆ ಜೀವನದಲ್ಲಿ ಸಂತೋಷ ಇರಲಿಲ್ಲ. ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡಿಯುತ್ತಲೇ ಇತ್ತು. ಪರಸ್ಪರ ವಿಚ್ಛೇದನ ಪಡೆಯಲು ಕೂಡ ಮುಂದಾಗಿದ್ದರು. ವಿದ್ಯಾ ತವರು ಮನೆ ಶ್ರೀರಾಂಪುರದಲ್ಲಿದ್ದರು. ನಂದೀಶ್ ಕೂಡ ಕೆಲ ದಿನಗಳು ವಿದ್ಯಾ ಮನೆಯಲ್ಲೇ ಇದ್ದ ಎನ್ನಲಾಗುತ್ತಿದ್ದು, ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದೆ ಎಂದು ವಿದ್ಯಾ ತಾಯಿ ಆರೋಪ ಮಾಡಿದ್ದಾರೆ.












Click it and Unblock the Notifications