ದೇವೇಗೌಡರೇ ಸ್ಪರ್ಧಿಸಿದರೂ ಮೈಸೂರಲ್ಲಿ ಗೆಲ್ಲೋದು ನಾವೇ:ಶ್ರೀನಿವಾಸ್ ಪ್ರಸಾದ್
ಮೈಸೂರು, ಮಾರ್ಚ್ 12:ಮೈಸೂರು- ಕೊಡಗು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರೇ ಬಂದರೂ ನಮಗೆ ಯಾವ ಅಂಜಿಕೆಯೂ ಇಲ್ಲ. ನಾವು ಲೋಕಸಭಾ ಚುನಾವಣೆಗೆ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಯಾರೇ ಸ್ಪರ್ಧೆ ಮಾಡಿದರೂ ನಾವು ಸಿದ್ಧರಾಗಿದ್ದೇವೆ. ದೇವೇಗೌಡರೇ ಮೈಸೂರು ಕ್ಷೇತ್ರಕ್ಕೆ ಬಂದರೂ ನಮಗೆ ಯಾವ ಅಂಜಿಕೆಯೂ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಸಿಟ್ಟಿಂಗ್ ಎಂಪಿ ನಮ್ಮವರೇ ಇದ್ದಾರೆ. ನಾವು ಫೇಸ್ ಮಾಡೋಕೆ ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದೇವೆ. ಈ ಬಾರಿ ಮೈಸೂರಿನಲ್ಲಿ ನಾವೇ ಗೆಲ್ಲುತ್ತೇವೆ ಎಂದು ತಿಳಿಸಿದರು.
ಹಾಸನದ ಎ.ಮಂಜು ನನ್ನ ಶಿಷ್ಯ. ಹಾಸನ ಲೋಕಸಭೆಗೆ ಬಿಜೆಪಿಯಿಂದ ಎ.ಮಂಜು ಸ್ಪರ್ಧೆ ಮಾಡುವಂತೆ ನಾನು ಹೇಳಿದ್ದೇನೆ. ಮಂಜು ಅವರ ಬಗ್ಗೆ ನಾನು ಬಿಜೆಪಿ ವರಿಷ್ಠರ ಜೊತೆ ಮಾತನಾಡುತ್ತೇನೆ. ಎ. ಮಂಜು ಕಾಂಗ್ರೆಸ್ ಪಕ್ಷದ ನಡೆಯಿಂದ ಅಸಮಾಧಾನಗೊಂಡಿದ್ದಾರೆ. ಅವರ ಸೇರ್ಪಡೆ ಕುರಿತು ಬಿಜೆಪಿ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇನ್ನು ಅಂತಿಮಗೊಂಡಿಲ್ಲ. ಈ ಎರಡು ದಿನಗಳಲ್ಲಿ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಫೈನಲ್ ಆಗುತ್ತದೆ. ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಚಾಮರಾಜನಗರದಲ್ಲಿ ನಾನೇ ಚುನಾವಣಾ ಜವಾಬ್ದಾರಿ ಹೊತ್ತು ಕೆಲಸ ಮಾಡಲಿದ್ದೇನೆ ಎಂದು ಶ್ರೀನಿವಾಸ್ ಪ್ರಸಾದ್ ಸ್ಪಷ್ಟಪಡಿಸಿದರು.












Click it and Unblock the Notifications