ಮತಗಟ್ಟೆಗೆ ಮೊದಲು ಬಂದ ಮತದಾರರಿಗೆ ಆರತಿ ಬೆಳಗಿ ಸ್ವಾಗತಿಸಿದ ಚುನಾವಣಾ ಸಿಬ್ಬಂದಿ
ಮೈಸೂರು, ಏಪ್ರಿಲ್ 18:ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಇಂದು ಬೆಳಗಿನ ಜಾವದಿಂದಲೇ ಮತದಾನ ಆರಂಭವಾಗಿದ್ದು, ಮತಗಟ್ಟೆಗೆ ಮೊದಲು ಬಂದ ಮತದಾರರಿಗೆ ಆರತಿ ಬೆಳಗಿ ಸಿಬ್ಬಂದಿ ವರ್ಗ ಸ್ವಾಗತಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕೆ. ಆರ್.ವಿಧಾನಸಭಾ ಕ್ಷೇತ್ರದ ಮೈಸೂರಿನ ಮಹರ್ಷಿ ಶಾಲೆಯ 16ನೇ ಮತಗಟ್ಟೆಯಲ್ಲಿ ಮತ ಹಾಕಲು ಬಂದವರಿಗೆ ಹೂವಿನ ಹಾರ ಹಾಕಿ ವಿಶಿಷ್ಟ ರೀತಿಯಲ್ಲಿ ಬರ ಮಾಡಿಕೊಂಡರು. ಮೈಸೂರಿನ ವಿಶ್ವೇಶ್ವರ ನಗರದ ಮಹರ್ಷಿ ವಿದ್ಯಾ ಸಂಸ್ಥೆಯ ಮತಗಟ್ಟೆ ಬಳಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ಮತದಾನ ಕೇಂದ್ರದ ದ್ವಾರದ ಬಳಿ ಬಾಳೆ ಕಂಬ ನೆಟ್ಟು, ಪ್ರಜಾಪ್ರಭುತ್ವದ ಹಬ್ಬಕ್ಕೆ ಸ್ವಾಗತವೆಂಬ ಕಮಾನು ನಿರ್ಮಾಣ ಮಾಡಿ, ಮದುವೆ ಮನೆಯಂತೆ ಸಿಂಗಾರ ಮಾಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್, ವಿಜಯನಗರದ 3 ನೇ ಹಂತದ ಮತಗಟ್ಟೆ ಸಂಖ್ಯೆ 108 ರಲ್ಲಿ ಮತ ಚಲಾವಣೆಯನ್ನು ಮಾಡಲು ಕುಟುಂಬ ಸಮೇತ ಆಗಮಿಸಿದರು. ಕೃಷ್ಣರಾಜ ಕ್ಷೇತ್ರದ ಜಯನಗರ ವಿಭಾಗದ ಬಾಲೋಧ್ಯಾನ ಶಾಲೆಯಲ್ಲಿ ಚಾಮರಾಜ ಕ್ಷೇತ್ರ ಶಾಸಕ ಎಲ್ ನಾಗೇಂದ್ರ ಹಾಗೂ ಬಿಜೆಪಿ ಮುಖಂಡರಾದ ಗೋಪಾಲ್ , ನಟಿ ಮಾಳವಿಕಾ ಅವರು ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು.
ಶಾಸಕ ರಾಮದಾಸ್ ಸಹ ಚಾಮುಂಡಿಪುರಂ ಸೆಂಟ್ ಮೇರಿಸ್ ಶಾಲೆಯಲ್ಲಿ ಸೋದರ ಶ್ರೀಕಾಂತ್ ದಾಸ್ ಜೊತೆ ಆಗಮಿಸಿ ಮತದಾನ ಮಾಡಿದರು. ಉಭಯ ಸುತ್ತೂರು ಶ್ರೀಗಳು ಸಹ ಜೆ ಎಸ್ ಎಸ್ ಕಾಲೇಜು ಊಟಿ ರಸ್ತೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಸಹ ಪತ್ನಿ ಸಮೇತ ಬಂದು ತಮ್ಮ ಮತ ಚಲಾಯಿಸಿದರು.

ಕೆ.ಆರ್.ಕ್ಷೇತ್ರದ ಶ್ರೀಕಾಂತ ಶಾಲೆಯಲ್ಲಿ ಯದುವೀರ್ ಒಡೆಯರ್ ದಂಪತಿ ಸಹ ಮತ ಚಲಾವಣೆ ಮಾಡಿದರು. 50 ಮಂದಿ ಮಾಲಾಧಾರಿಗಳು ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು ಗ್ರಾಮದಲ್ಲಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಮತದಾನ ಮಾಡಿದ ನಂತರ ಮಾಲಾಧಾರಿಗಳು ಶಬರಿಮಲೆ ಯಾತ್ರೆಗೆ ಹೊರಟರು.












Click it and Unblock the Notifications