ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಲು ಕಾರಣ ಯಾರು? ಬಿವೈ ವಿಜಯೇಂದ್ರ ಹೇಳಿದ್ದಿಷ್ಟು
ರಾಜ್ಯ ಸರಕಾರಕ್ಕೆ ಒಂದು ವರ್ಷ ಪೂರ್ಣಗೊಂಡಿದ್ದು, ಈ ಸರಕಾರದ ಬಗ್ಗೆ ಜನರು ಆಕ್ರೋಶಗೊಂಡಿದ್ದಾರೆ. ಸರಕಾರದ ಆಡಳಿತ ವೈಖರಿ ಗಮನಿಸಿದರೆ ಲಾಲು ಪ್ರಸಾದ್ ಯಾದವ್ ಆಡಳಿತಾವಧಿಯ ಬಿಹಾರ ನೆನಪಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಹಾರ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಇದು ಅಸಮರ್ಥ ಸರ್ಕಾರವಾಗಿದೆ. ದಾವಣಗೆರೆಯ ಚನ್ನಗಿರಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಠಾಣೆಯನ್ನು ಧ್ವಂಸ ಮಾಡಿದ್ದಾರೆ. ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಹತ್ಯೆಗಳು, ಲವ್ ಜಿಹಾದ್ ಪ್ರಕರಣಗಳನ್ನು ನೋಡಿದರೆ ರಾಜ್ಯದಲ್ಲಿ ಸಿಎಂ, ಗೃಹ ಸಚಿವರು ಇದ್ದಾರಾ ಎಂಬ ಸಂಶಯ ಮೂಡುತ್ತದೆ ಎಂದರು.

ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಲು ವಿಜಯೇಂದ್ರ ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರಿಗೆ ಯಾವಾಗ ಉತ್ತರ ಕೊಡಬೇಕು? ಎಲ್ಲಿ ಕೊಡಬೇಕು? ಅಲ್ಲಿ ಕೊಡುತ್ತೇನೆ. ನಾನು ರಾಜ್ಯಾಧ್ಯಕ್ಷನಾದರೂ ಅಭ್ಯರ್ಥಿಗಳ ಆಯ್ಕೆಯನ್ನು ರಾಷ್ಟ್ರೀಯ ಅಧ್ಯಕ್ಷರು ಮಾಡುತ್ತಾರೆ. ಈ ವಿಚಾರದಲ್ಲಿ ಹಲವರು ಏನೇನೋ ಮಾತನಾಡಿದ್ದಾರೆ ಎಂದರು.
ವಿವೇಕಾನಂದ ಗೆಲುವಿಗೆ ಶ್ರಮಿಸಲು ಕರೆ
ಶಿಕ್ಷಕರ ಕ್ಷೇತ್ರದ ಪಾವಿತ್ರ್ಯತೆ ಉಳಿಯಬೇಕೆಂದರೆ ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗಿಟ್ಟು ಮತದಾರರ ಮನವೊಲಿಸಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಗೆಲುವಿಗೆ ಹಗಲಿರುಳು ಶ್ರಮಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದೀರಿ. ಅದೇ ರೀತಿ ವಿಧಾನಪರಿಷತ್ ಚುನಾವಣೆಯಲ್ಲೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಬೇಕಿದೆ. ಈಗಾಗಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ಪ್ರಚಾರ ಸಭೆ ಆಗಿದೆ. ನಾವು ನಾಳೆ ಗಟ್ಟಿಯಾಗಬೇಕಾದರೆ ಪಕ್ಷ ಉಳಿಸಬೇಕು. ತುಮಕೂರಿನಲ್ಲಿ ಕಾರ್ಯಕರ್ತರು ಜೆಡಿಎಸ್ ಹಾಗೂ ಬಿಜೆಪಿ ಶಾಲುಗಳನ್ನು ಹಾಕಿದ್ದರು. ಆದರೆ, ಮೈಸೂರಿನಲ್ಲಿ ಬಿಜೆಪಿ ಶಾಲು ಮಾತ್ರ ಇದೆ. ಹಾಗಾಗಿ ಭಿನ್ನಾಭಿಪ್ರಾಯ ಇದ್ದರೆ ಅವುಗಳನ್ನು ಬದಿಗಿಟ್ಟು ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ ಕೆಲಸ ಮಾಡಬೇಕು, ಎಂದರು.












Click it and Unblock the Notifications