Mysuru: ನವೀಕೃತ ಅಶೋಕಪುರಂ ರೈಲ್ವೆ ನಿಲ್ದಾಣ ನಾಳೆ ಉದ್ಘಾಟನೆ: ಪ್ರಯಾಣಿಕರಿಗಾಗುವ ಅನುಕೂಲವೇನು?
ಮೈಸೂರು, ಮಾರ್ಚ್ 03: ಮೈಸೂರು ನಗರದ ಬಹು ನಿರೀಕ್ಷಿತ ನವೀಕೃತ ಅಶೋಕಪುರಂ ರೈಲ್ವೆ ನಿಲ್ದಾಣ ನಾಳೆ ಮಾರ್ಚ್ 4 ಸೋಮವಾರದಂದು ಉದ್ಘಾಟನೆಗೊಳ್ಳಲಿದೆ.
ನವೀಕರಿಸಲಾದ ಅಶೋಕಪುರಂ ರೈಲ್ವೆ ನಿಲ್ದಾಣದ ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳು, ಹೊಸ ಎರಡನೇ ಪ್ರವೇಶ ಮತ್ತು ಪ್ರಯಾಣಿಕರ ಸಂಖ್ಯೆಯಲ್ಲಿ ಯೋಜಿತ ಹೆಚ್ಚಳಕ್ಕೆ ಅನುಗುಣವಾಗಿ ವಿಸ್ತೃತ ಪಾರ್ಕಿಂಗ್ ಸೌಲಭ್ಯಗಳನ್ನು ಒಳಗೊಂಡಿರುವ ಹೊಸ ಘಟಕಗಳನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಲಿದ್ದಾರೆ.

32.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಶೋಕಪುರಂ ರೈಲ್ವೆ ನಿಲ್ದಾಣ ನವೀಕರಣ ಮೈಸೂರು-ಬೆಂಗಳೂರು ಮತ್ತು ಮೈಸೂರು-ಹಾಸನದಂತಹ ಪ್ರಮುಖ ಮಾರ್ಗಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಮರುಹಂಚಿಕೆ ಮಾಡುವುದರ ಜೊತೆಗೆ ಮುಖ್ಯ ಮೈಸೂರು ನಿಲ್ದಾಣದ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಪ್ರಯಾಣಿಕರಿಗೆ ಹೆಚ್ಚುವರಿ ಸೇವೆಗಳನ್ನು ಪರಿಚಯಿಸಲು ಅಧಿಕಾರಿಗಳಿಗೆ ನೆರವಾಗಲಿದೆ.
ಕೇವಲ ಮೂರು ಪ್ಲಾಟ್‌ಫಾರಂ ಹೊಂದಿದ್ದ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಈಗ 5 ಪ್ಲಾಟ್‌ಫಾರಂಗಳನ್ನು ನಿರ್ಮಿಸಲಾಗಿದ್ದು, ಮೈಸೂರಿಗೆ ಬರುವ ರೈಲುಗಾಡಿಗಳನ್ನು ಚಾಮರಾಜನಗರ ಕಡೆಗೆ ವಿಸ್ತರಿಸಬಹುದಾಗಿದೆ. ಸ್ಟೇಬ್ಲಿಂಗ್ ಲೈನ್ ನಿರ್ಮಿಸಲಾಗಿದ್ದು , ಇದರಿಂದ ರೈಲು ಗಾಡಿಗಳನ್ನು ಈ ಜಾಗದಲ್ಲಿ ನಿಲುಗಡೆ ಮಾಡಲು ಅವಕಾಶವಾಗುತ್ತದೆ.
ರೈಲುಗಾಡಿ ಸ್ವಚ್ಛಗೊಳಿಸುವುದು ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಅನುಕೂಲವಾಗಲಿದೆ. ನಿಲ್ದಾಣಕ್ಕೆ 2ನೇ ಪ್ರವೇಶದ್ವಾರ ನಿರ್ಮಿಸಲಾಗಿದ್ದು, ಪ್ರಯಾಣಿಕ ಸ್ನೇಹಿ ವಾತಾವರಣ ಸೃಷ್ಟಿಯಾಗಿದೆ. ರೈಲಿನ ಕೋಚ್‌ಗಳಿಗೆ ನೀರು ತುಂಬುವ ವ್ಯವಸ್ಥೆಯನ್ನೂ ಮಾಡಲಾಗಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರು ತಮ್ಮ ವಾಹನ ನಿಲುಗಡೆಗೆ ಹೊಸದಾಗಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.
'ಅಶೋಕಪುರಂ ರೈಲ್ವೆ ನಿಲ್ದಾಣವು ಮೈಸೂರು ನಗರ ರೈಲು ನಿಲ್ದಾಣದಿಂದ ಕೇವಲ 5.2 ಕಿಮೀ ದೂರದಲ್ಲಿದೆ. ಇದೀಗ ಈ ನಿಲ್ದಾಣವನ್ನು ಮೈಸೂರಿನ ಎರಡನೇ ದೊಡ್ಡ ನಿಲ್ದಾಣವಾಗಿ ಪರಿವರ್ತಿಸಲಾಗಿದೆ. ಸದ್ಯ ಐದು ಚಾಲನೆಯಲ್ಲಿರುವ ಹಳಿ ಮಾರ್ಗಗಳು ಮತ್ತು ಎರಡು ಸ್ಟೇಬ್ಲಿಂಗ್ ಲೈನ್‌ಗಳನ್ನು ಒಳಗೊಂಡಿದೆ. ಪ್ರಯಾಣಿಕರು ಪ್ಲಾಟ್‌ಫಾರಂಗೆ ತೆರಳಲು ಫುಟ್ ಓವರ್ ಬ್ರಿಡ್ಜ್ ಅನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು ಇನ್ನು ಮುಂದೆ ಬಳಕೆ ಮಾಡಬಹುದಾಗಿದೆ' ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications