ಮೆಮು ರೈಲು: ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಮಹತ್ವದ ಮಾಹಿತಿ
ಮೈಸೂರು, ಮಾರ್ಚ್ 01: ಮೈಸೂರು ನಗರದ ರೈಲು ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು 35.50 ಕೋಟಿ ರೂ. ವೆಚ್ಚದಲ್ಲಿ ಅಶೋಕಪುರಂ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ಹಲವು ರೈಲುಗಳನ್ನು ಈ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿದೆ. ಜನರ ವಿರೋಧದ ನಡುವೆಯೂ ರೈಲುಗಳು ಇಲ್ಲಿಂದ ಸಂಚಾರವನ್ನು ನಡೆಸುತ್ತಿವೆ. ಈಗ ಇನ್ನೂ ಎರಡು ರೈಲುಗಳನ್ನು ಮಾರ್ಚ್ 1ರಿಂದಲೇ ಜಾರಿಗೆ ಬರುವಂತೆ ಅಶೋಕಪುರಂಗೆ ಕಳಿಸಲಾಗಿದೆ.
ಮೈಸೂರು- ಬೆಂಗಳೂರು ನಡುವಿನ ಎರಡು ಮೆಮು ರೈಲುಗಳನ್ನು ಮಾರ್ಚ್ 1ರಿಂದ ಜಾರಿಗೆ ಬರುವಂತೆ ಅಶೋಕಪುರಂ ರೈಲು ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ಬರುವ, ಬೆಂಗಳೂರಿನಿಂದ ಮೈಸೂರಿಗೆ ಸಂಚಾರ ನಡೆಸುವ ಪ್ರಯಾಣಿಕರು ಈ ಕುರಿತು ಮಾಹಿತಿ ತಿಳಿದು ಸಂಚಾರ ನಡೆಸಬಹುದು.

ರೈಲ್ವೆ ಖಾತೆ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣ ಫೆಬ್ರವರಿ 16ರಂದು 8 ರೈಲುಗಳನ್ನು ಅಶೋಕಪುರಂ ರೈಲು ನಿಲ್ದಾಣಕ್ಕೆ ಸ್ಥಳಾಂತರ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಆಗ ಬೆಂಗಳೂರು-ಮೈಸೂರು ನಡುವಿನ ಎರಡು ಮೆಮು ರೈಲನ್ನು ಅಲ್ಲಿಗೆ ಕಳಿಸಲಾಗಿತ್ತು. ಇದು ಯಶಸ್ವಿಯಾದ ಹಿನ್ನಲೆಯಲ್ಲಿ ಈಗ ಇನ್ನೂ ಎರಡು ರೈಲುಗಳನ್ನು ಅಶೋಕಪುರಂನಿಂದ ಆರಂಭಿಸಲಾಗುತ್ತಿದೆ.
ರೈಲುಗಳ ಪಟ್ಟಿ ಇಲ್ಲಿದೆ: ಪ್ರಯಾಣಿಕರ ಬೇಡಿಕೆಯಂತೆ ಮುಂಜಾನೆ ಮತ್ತು ತಡರಾತ್ರಿ ಹೊರಡುವ ಎರಡು ಬೆಂಗಳೂರು-ಮೈಸೂರು ಮೆಮು ರೈಲುಗಳನ್ನು ಅಶೋಕಪುರಂ ರೈಲು ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ರೈಲುಗಳು ಇನ್ನು ಮುಂದೆ ಕೆಎಸ್ಆರ್ ಬೆಂಗಳೂರು-ಅಶೋಕಪುರಂ ರೈಲು ನಿಲ್ದಾಣದ ನಡುವೆ ಸಂಚಾರವನ್ನು ನಡೆಸಲಿವೆ.
ರೈಲು ನಂಬರ್ 66579/ 80 ಕೆಎಸ್ಆರ್ ಬೆಂಗಳೂರು-ಅಶೋಕಪುರಂ ಮೆಮು ರೈಲು ಸ್ಥಳಾಂತರಗೊಂಡಿದೆ. ರೈಲು 66579 ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ 2.05ಕ್ಕೆ ಹೊರಡಲಿದೆ. ಮೈಸೂರಿಗೆ 5.10ಕ್ಕೆ ತಲುಪಲಿದೆ. ಚಾಮರಾಜಪುರಂ 5.20, ಅಶೋಕಪುರಂ ರೈಲು ನಿಲ್ದಾಣಕ್ಕೆ 5.30ಕ್ಕೆ ತಲುಪಲಿದೆ. ರೈಲು ಅಶೋಕಪುರಂ ರೈಲು ನಿಲ್ದಾಣದಿಂದ 10.25ಕ್ಕೆ ಹೊರಟು ಚಾಮರಾಜಪುರಂ 10.30, ಮೈಸೂರು 10.40, ಕೆಎಸ್ಆರ್ ಬೆಂಗಳೂರು ನಿಲ್ದಾಣಕ್ಕೆ 2.30ಕ್ಕೆ ತಲುಪಲಿದೆ.
ರೈಲು ಸಂಖ್ಯೆ 66883/ 54 ಬೆಂಗಳೂರು-ಅಶೋಕಪುರಂ ರೈಲು ಸಹ ಸ್ಥಳಾಂತರಗೊಂಡಿದೆ. ರೈಲು ಸಂಖ್ಯೆ 66553 ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಸಂಜೆ 7 ಗಂಟೆಗೆ ಹೊರಡಲಿದೆ. ಮೈಸೂರಿಗೆ 9.55ಕ್ಕೆ ತಲುಪಲಿದೆ. ಚಾಮರಾಜಪುರಂ 10:05, ಅಶೋಕಪುರಂಗೆ 2.30ಕ್ಕೆ ತಲುಪಲಿದೆ. ರೈಲು ಸಂಖ್ಯೆ 66554 ಅಶೋಕಪುರಂ 5.45ಕ್ಕೆ ಹೊರಟು, ಚಾಮರಾಜಪುರಂಗೆ 5.49ಕ್ಕೆ ತಲುಪಲಿದೆ. ಮೈಸೂರಿನಿಂದ 6 ಗಂಟೆಗೆ ಹೊರಟು, ಬೆಂಗಳೂರು ನಗರಕ್ಕೆ 9.15ಕ್ಕೆ ತಲುಪಲಿದೆ.
ಈ ಹಿಂದೆ ರೈಲು ಸಂಖ್ಯೆ 06525/ 26 ಮತ್ತು 66551/ 52 ಬೆಂಗಳೂರು-ಮೈಸೂರು ಡೆಮು ರೈಲುಗಳನ್ನು ಅಶೋಕಪುರಂ ರೈಲು ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿತ್ತು. ಮೈಸೂರು ನಗರದಿಂದ ಅಶೋಕಪುರಂ ರೈಲು ನಿಲ್ದಾಣಕ್ಕೆ ತೆರಳುವಾಗ ಸಂಚಾರ ದಟ್ಟಣೆ ಉಂಟಾಗುತ್ತದೆ. ಅಶೋಕಪುರಂನಿಂದ ರೈಲುಗಳು ಸಂಚಾರ ಮಾಡುವಾಗ ಸುತ್ತಮುತ್ತಲೂ ಫ್ಲೈ ಓವರ್ ಇಲ್ಲದ ಕಾರಣ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ಜನರು ಆರೋಪಿಸಿದ್ದಾರೆ.












Click it and Unblock the Notifications