ಚುಂಚನಕಟ್ಟೆ ಧನುಷ್ಕೋಟಿ ಕಾವೇರಿ ಜಲಪಾತೋತ್ಸವ ಸಂಭ್ರಮ: ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ
ಮೈಸೂರು, ನವೆಂಬರ್ 28: ಮೈಸೂರು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಮೈಸೂರು ಸಂಯುಕ್ತಾಶ್ರಯದಲ್ಲಿ ಧನುಷ್ಕೋಟಿ ಕಾವೇರಿ ಜಲಪಾತೋತ್ಸವ ಕಾರ್ಯಕ್ರಮವನ್ನು ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ಎರಡು ದಿನಗಳ ನಡೆಯಲಿದೆ. ಸಾಲಿಗ್ರಾಮ ತಾಲೂಕಿನ ಶ್ರೀರಾಮ ದೇವಸ್ಥಾನದ ಆವರಣದ ಚುಂಚನಕಟ್ಟೆಯ ಅವರಣದಲ್ಲಿ ಸಂಜೆ 6.30ಕ್ಕೆ ಜಲಪಾತೋತ್ಸವ ಕಾರ್ಯಕ್ರಮ ನಡೆಯಲಿದೆ
ಈ ಬಗ್ಗೆ ಶಾಸಕ ಡಿ.ರವಿಶಂಕರ್ ಮಾಹಿತಿ ನೀಡಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ನೆರವೇರಿಸಲಿದ್ದಾರೆ. ಜೊತೆಯಾಗಿ ಘನ ಸರ್ಕಾರದ ಹಲವಾರು ಸಚಿವರು ಹಾಗೂ ಶಾಸಕರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದ್ದಾರೆ.

ನವೆಂಬರ್ 30 ಶನಿವಾರ ಸಂಜೆ 4.30 ರಿಂದ 5 ಗಂಟೆಯವರೆಗೆ ಬಸವಯ್ಯ(ಲಕ್ಷಿತಾಮ್) ಸಾಲಿಗ್ರಾಮ ಇವರ ತಂಡದಿಂದ ಜನಪದ ಝೇಂಕಾರ ಗಾಯನ ಹಾಗೂ ಸಂಜೆ 5.00 ರಿಂದ 6.30 ರವರೆಗೆ ಡಾ.ಕಾ.ರಾಮೇಶ್ವರಪ್ಪ ಮತ್ತು ತಂಡದ ಇನಿದನಿ ಮಣ್ಣಮಕ್ಕಳ ಹೊನ್ನಪದಗಳ ಬಳಗ ಮೈಸೂರು ಇವರ ತಂಡದಿಂದ ಕನ್ನಡ ಸಂಗೀತ ವೈಭವ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 7.30 ರಿಂದ 9.30 ರವರೆಗೆ ಖ್ಯಾತ ಸಂಗೀತ ನಿರ್ದೇಶಕರು ಮತ್ತು ಗಾಯಕರಾದ ರಘು ದೀಕ್ಷಿತ್ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಡಿಸೆಂಬರ್ 01 ಭಾನುವಾರದಂದು ಸಂಜೆ 4.30 ರಿಂದ 5.00 ಗಂಟೆಯವರೆಗೆ ರಶ್ಮಿ ಮತ್ತು ತಂಡ ಮೈಸೂರು ರವರಿಂದ ಜನಪದ ಸಂಗೀತ ಕಾರ್ಯಕ್ರಮ, ಸಂಜೆ 5 ರಿಂದ 6.30 ರವರೆಗೆ ಯು.ರಾಜೇಶ್ ಪಡಿಯಾರ್ ಹಾಗೂ ರಶ್ಮಿ ಚಿಕ್ಕಮಗಳೂರು ಮತ್ತು ತಂಡ ಮೈಸೂರು ಅವರಿಂದ ದಿವಂಗತ ಸಿ.ಅಶ್ವಥ್ ಗೀತೆಗಳ ಗಾಯನ (ಕನ್ನಡವೇ ಸತ್ಯ-ಕನ್ನಡವೇ ನಿತ್ಯ) ನಡೆಯಲಿದೆ.
ಸಂಜೆ 6.30 ರಿಂದ 7.30 ರವರೆಗೆ ಗ್ರೀಮ್ಸ್ ಇವೆಂಟ್ಸ್ ಅಂಡ್ ಫ್ಯಾಷನ್ಸ್ ಬೆಂಗಳೂರು ಇವರಿಂದ ಸ್ಯಾಂಡಲ್‌ವುಡ್ ನೈಟ್ಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ನಟಿ ಪುಷ್ಪಾವತಿ ಖ್ಯಾತಿಯ ನಿಮಿಕಾ ರತ್ನಾಕರ್, ಖ್ಯಾತ ಕಿರುತೆರೆ ನಟಿ ಅಗ್ನಿಸಾಕ್ಷಿ ಖ್ಯಾತಿಯ ಪ್ರಿಯಾಂಕ ಸೇರಿದಂತೆ ನಟ-ನಟಿಯರು ಭಾಗಿಯಾಗಲಿದ್ದಾರೆ.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕಿನ ಜನರು, ರೈತರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧನುಷ್ಕೋಟಿ ಕಾವೇರಿ ಜಲಪಾತೋತ್ಸವನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಸ್ಥಳೀಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications